ತಿರುವನಂತರಪುರ, ಜು.2: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್(S. Sreesanth) ಅವರ ಮೇಲಿನ ಮೂರು ವರ್ಷಗಳ ನಿಷೇಧವನ್ನು ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಹಿಂಪಡೆದಿದೆ. ಸಂಸ್ಥೆಯ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕೆ 2025ರ ಏಪ್ರಿಲ್‌ನಲ್ಲಿ ಈ ವೇಗದ ಬೌಲರ್ ಮೇಲೆ ನಿಷೇಧ ವಿಧಿಸಲಾಗಿತ್ತು.
ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಯಿತು. ‘ನಿಷೇಧ ವಾಪಸು ಪಡೆಯವ ನಿರ್ಧಾರವನ್ನು ಸಭೆಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಯಿತು. ಭವಿಷ್ಯದಲ್ಲಿ ಈ ರೀತಿಯ ಇಂಥ ವರ್ತನೆ ಪುನರಾವರ್ತಿಸಿದಲ್ಲಿ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯು ಎಚ್ಚರಿಕೆ ನೀಡಿದೆ’ ಎಂದು ಕೆಸಿಎ ಹೇಳಿಕೆ ತಿಳಿಸಿದೆ. ಶ್ರೀಶಾಂತ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಬೇಷರತ್ ಆಗಿ ಸಂಸ್ಥೆ ಕ್ಷಮೆಯಾಚಿಸಿದ ಕಾರಣ ಈ ಕೆಸಿಎ ಈ ನಿರ್ಧಾರ ಕೈಗೊಂಡಿದೆ.
2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರಾಗಿದ್ದಾಗ ಶ್ರೀಶಾಂತ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಂಧಿಸಲಾಗಿತ್ತು. ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಸುದೀರ್ಘ ವಿಚಾರಣೆಯ ನಂತರ ದೆಹಲಿ ಹೈಕೋರ್ಟ್ ಇವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.
ಭಾರತದ ಮಾಜಿ ಕೋಚ್ ಜತೆ ಬ್ಯಾಟಿಂಗ್ ತರಬೇತಿ ಪಡೆದ ವಿರಾಟ್ ಕೊಹ್ಲಿ
ಇದಾದ ಬಳಿಕ ಬಿಸಿಸಿಐ ಕೂಡ ಶ್ರೀಶಾಂತ್ ಅವರ ನಿಷೇಧವನ್ನು 7 ವರ್ಷಕ್ಕಿಳಿಸಿತ್ತು. 2020ರ ಸೆಪ್ಟೆಂಬರ್‌ನಲ್ಲಿ ಈ ನಿಷೇಧದಿಂದ ಮುಕ್ತರಾಗಿದ್ದರು. ಆದರೆ ಈ ನಿಷೇಧ ಮುಗಿಯುವಷ್ಟರಲ್ಲಿ ಅವರ ವಯಸ್ಸು ಕೂಡ 40ರ ಸನಿಹಕ್ಕೆ ಬಂದಿತ್ತು. ಹೀಗಾಗಿ ಅವರ ಕ್ರಿಕೆಟ್ ಜೀವನ ಫಿಕ್ಸಿಂಗ್ನಿಂದಾಗಿ ದುರಂತ ಅಂತ್ಯ ಕಂಡಿತ್ತು.
ಶ್ರೀಶಾಂತ್ 2005-2011ರ ಅವಧಿಯಲ್ಲಿ ಭಾರತದ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 87, 75 ಹಾಗೂ 7 ವಿಕೆಟ್ ಉರುಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯನೆಂಬುದು ಶ್ರೀಶಾಂತ್ ಪಾಲಿನ ಹೆಗ್ಗಳಿಕೆ. 2011ರಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ಪರ ಒಟ್ಟು 44 ಪಂದ್ಯಗಳನ್ನಾಡಿದ್ದ ಶ್ರೀಶಾಂತ್ 40 ವಿಕೆಟ್ ಕಬಳಿಸಿ ಮಿಂಚಿದ್ದರು.