ಬೆಂಗಳೂರು, ಮಾ,18: ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ ಜೋಶ್ ಎಲ್ಲಡೆ ಕಾವೇರತೊಡಗಿದೆ. ಮಾ.28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾಗುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಈ ಬಾರಿಯ ಐಪಿಎಲ್ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ(Virat Kohli) ಬೆಂಗಳೂರಿಗೆ ಬಂದು ತಲುಪಿದ್ದಾರೆ.
ಲಂಡನ್‌ನಿಂದ ಮಂಗಳವಾರ ತಡರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೊಹ್ಲಿ, ಬುಧವಾರ ವಿಶ್ರಾಂತಿ ಪಡೆದು ಗುರುವಾರದಿಂದ ಸಹ ಆಟಗಾರರ ಜತೆ ಅಭ್ಯಾಸದಲ್ಲಿ ತೊಡಗಿಕೊಳ್ಳಲಿದ್ದಾರೆ.
ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 144.71 ರ ಅದ್ಭುತ ಸ್ಟ್ರೈಕ್ ರೇಟ್ ಮತ್ತು 54.75 ರ ಸರಾಸರಿಯಲ್ಲಿ 657 ರನ್ ಗಳಿಸಿದ್ದರು. ಇದರಲ್ಲಿ ಎಂಟು ಅರ್ಧಶತಕ ದಾಖಲಾಗಿತ್ತು.
2025ರ ಜೂ.4ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳನ್ನು ಆಯೋಜಿಸಬೇಕಿದ್ದರೆ ಹಲವು ಬದಲಾವಣೆಗಳನ್ನು ಮಾಡಲು ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಶಿಫಾರಸು ಮಾಡಿತ್ತು. ಇದರ ಮೇಲ್ವಿಚಾರಣೆಗೆ ಸರ್ಕಾರವು ಹಲವು ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನೂ ರಚಿಸಿತ್ತು.
ಇತ್ತೀಚೆಗಷ್ಟೇ ಟೂರ್ನಿಗೆ ಷರತ್ತುಬದ್ಧ ಅನುಮತಿ ನೀಡಿದ್ದ ಸರ್ಕಾರ, ಕ್ರೀಡಾಂಗಣದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲು ಮಾ.15ರ ಗಡುವು ವಿಧಿಸಿತ್ತು. ಇದರ ಭಾಗವಾಗಿ ಮಾ.13ರಂದು ತಜ್ಞರ ಸಮಿತಿ ಕ್ರೀಡಾಂಗಣಕ್ಕೆ ಆಗಮಿಸಿ, ಕೆಎಸ್‌ಸಿಎ ಕೈಗೊಂಡಿರುವ ಕೆಲಸಗಳನ್ನು ಪರಿಶೀಲಿಸಿತ್ತು.
ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಪಾತ್ರದ ಬಗ್ಗೆ ಕೋಚ್ ಮಹತ್ವದ ಹೇಳಿಕೆ
ಒಟ್ಟಾರೆಯಾಗಿ ಆರ್‌ಸಿಬಿ ತನ್ನ ತವರಿನ 7 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲಿ ಆಡಲಿದೆ. ಇನ್ನೆರಡು ಪಂದ್ಯಗಳು ರಾಯ್ಪುರದಲ್ಲಿ ನಡೆಯಲಿವೆ. ಐಪಿಎಲ್‌ಗೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಬೇಕಿದೆ.
ಕಳೆದ ವರ್ಷ ಜೂನ್‌ನಲ್ಲಿ ಉಂಟಾದ ಕಾಲ್ತುಳಿತದ ಬಳಿಕ ಈವರೆಗೂ ಚಿನ್ನಸ್ವಾಮಿ ಕ್ರೀಡಾಂಗಣ ಗೊಂದಲದ ಗೂಡಾಗಿತ್ತು. ಕಾಲ್ತುಳಿದ ಬಳಿಕ ಹಲವು ಮಹತ್ವದ ಟೂರ್ನಿಗಳು ಚಿನ್ನಸ್ವಾಮಿಯಿಂದ ಸ್ಥಳಾಂತರಗೊಂಡಿದ್ದವು. ಹೀಗಾಗಿ ಐಪಿಎಲ್ ನಡೆಯುವುದು ಕೂಡಾ ಅನುಮಾನ ಎನಿಸಿತ್ತು. ಬಳಿಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ ಹೊರತಾಗಿಯೂ, ಆರ್‌ಸಿಬಿ ತಂಡ ಬೆಂಗಳೂರಲ್ಲಿ ಆಡಲು ಹಿಂದೇಟು ಹಾಕಿತ್ತು.