ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KKR vs GT: ರನ್‌ ಮಳೆಯಲ್ಲಿ ಮುಳುಗಿದ ಟೈಟಾನ್ಸ್‌; ಕೆಕೆಆರ್‌ಗೆ 29 ರನ್‌ ಜಯ

Kolkata Knight Riders vs Gujarat Titans: ಗುಜರಾತ್‌ ಪರ ಬೌಲಿಂಗ್‌ ನಡೆಸಿದ 6 ಮಂದಿಯೂ ಸರಿಯಾಗಿ ದಂಡಿಸಿಕೊಂಡರು. ಅನುಭವಿಗಳಾದ ರಶೀದ್‌ ಖಾನ್‌(4-0-57-0) ಮತ್ತು ಮೊಹಮ್ಮದ್‌ ಸಿರಾಜ್‌(4-0-50-1) 50 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿದರು. ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡದ್ದು ಜಾಸೆನ್‌ ಹೋಲ್ಡರ್‌ ಮಾತ್ರ. ಅವರು 4 ಓವರ್‌ಗಳಲ್ಲಿ 39 ರನ್‌ ಬಿಟ್ಟುಕೊಟ್ಟರು.

Angkrish Raghuvanshi and Finn Allen

ಕೋಲ್ಕತಾ, ಮೇ 16: ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಶನಿವಾರದ ಹೈ-ಸ್ಕೋರಿಂಗ್‌ ಐಪಿಎಲ್‌(IPL 2026) ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್‌(KKR vs GT) ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 29 ರನ್‌ ಅಂತರದ ಗೆಲುವು ಸಾಧಿಸಿತು. ಈ ಮೂಲಕ ತನ್ನ ಪ್ಲೇ-ಆಫ್‌ ಆಸೆಯನ್ನು ಜೀವಂತವಿರಿಸಿತು. ಸೋಲು ಕಂಡ ಶುಭಮನ್‌ ಗಿಲ್‌ ಪಡೆ ಪ್ಲೇ-ಆಫ್‌ ಪ್ರವೇಶಕ್ಕೆ ಇನ್ನೂ ಒಂದು ಪಂದ್ಯ ಕಾಯಬೇಕಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಗುಜರಾತ್‌ ತಂಡ ಬೌಲಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಆಹ್ವಾನ ಪಡೆದ ಕೋಲ್ಕತಾ, ಫಿನ್‌ ಅಲೆನ್‌ ಮತ್ತು ಯುವ ಬ್ಯಾಟರ್‌ ರಘುವಂಶಿ ಅವರ ಬಿರುಸಿನ ಬ್ಯಾಟಿಂಗ್‌ ನೆರವಿನಿಂದ ಕೇವಲ 2 ವಿಕೆಟ್‌ಗೆ 247 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಜವಾಬಿತ್ತ ಗುಜರಾತ್‌ ಕೂಡ ಒಂದು ಹಂತದ ವರೆಗೆ ದಿಟ್ಟ ಹೋರಾಟ ನಡೆಸಿತು. ಆದರೆ ಅಂತಿಮವಾಗಿ 4 ವಿಕೆಟ್‌ಗೆ 218 ರನ್‌ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಬೃಹತ್‌ ಮೊತ್ತದ ಚೇಸಿಂಗ್‌ ವೇಳೆ ಗುಜರಾತ್‌ ಕೂಡ ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿತು. ನಾಯಕ ಶುಭಮನ್‌ ಗಿಲ್‌ ಮತ್ತು ಸಾಯಿ ಸುದರ್ಶನ್‌ ಓವರ್‌ಗೆ 10 ರನ್‌ ಕಲೆಹಾಕಿದರು. ಈ ವೇಳೆ ಗಾಯಗೊಂಡ ಸುದರ್ಶನ್‌ ರಿಟರ್ಡ್‌ ಹರ್ಟ್‌ ಆಗಿ ಪೆವಿಲಿಯನ್‌ ಸೇರಿದರು. ಆಗ ಅವರು 23 ರನ್‌ ಗಳಿಸಿದ್ದರು. ಬಳಿಕ ಬಂದ ನಿಶಾಂತ್ ಸಿಂಧು(1) ವಿಕೆಟ್‌ ಕಳೆದುಕೊಂಡರು. ಗಿಲ್‌ ಮತ್ತು ಬಟ್ಲರ್‌ ಶಕ್ತಿ ಮೀರಿದ ಬ್ಯಾಟಿಂಗ್‌ ಪ್ರದರ್ಶನ ತೋರಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಗಿಲ್‌ 85 ರನ್‌ ಗಳಿಸಿದ ವೇಳೆ ಸುನಿಲ್‌ ನರೈನ್‌ ಎಸೆತಕ್ಕೆ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಲಾಂಗ್‌ ಆನ್‌ನಲ್ಲಿ ಅಂಕುಲ್‌ ರಾಯ್‌ ಹಿಡಿದ ಕ್ಯಾಚ್‌ಗೆ ವಿಕೆಟ್‌ ಕಳೆದುಕೊಂಡರು.

ಗಾಯದಿಂದ ಚೇತರಿಕೆ ಕಂಡು ಮತ್ತೆ ಬ್ಯಾಟಿಂಗ್‌ ಮುಂದುವರಿಸಿದ ಸಾಯಿ ಸುದರ್ಶನ್‌(53*) ಅರ್ಧಶತಕ ಪೂರ್ತಿಗೊಳಿಸಿದರು. ಜಾಸ್‌ ಬಟ್ಲರ್‌(57) ಗಳಿಸಿ ಸೌರಭ್ ದುಬೆಗೆ ವಿಕೆಟ್‌ ಒಪ್ಪಿಸಿದರು. ಇದು ಅವರ ಚೊಚ್ಚಲ ಐಪಿಎಲ್‌ ವಿಕೆಟ್‌. 200ನೇ ಐಪಿಎಲ್‌ ಪಂದ್ಯವನ್ನಾಡಿದ ಸುನೀಲ್‌ ನರೈನ್‌ 2 ವಿಕೆಟ್‌ ಕಿತ್ತರು. ಪಂದ್ಯ ಸೋತರೂ ಸಾಯಿ ಸುದರ್ಶನ್‌ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಅತಿ ಕಡಿಮೆ ಇನಿಂಗ್ಸ್‌(78)ನಲ್ಲಿ 3 ಸಾವಿರ ಟಿ20 ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾಸ ಶಾನ್‌ ಮಾರ್ಷ್‌(85 ಇನಿಂಗ್ಸ್‌) ಹೆಸರಿನಲ್ಲಿತ್ತು.

ಅಲೆನ್‌- ರಘುವಂಶಿ ಅಬ್ಬರ

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ ಪರ ನಾಯಕ ಅಜಿಂಕ್ಯ ರಹಾನೆ(14) ವೈಫಲ್ಯ ಕಂಡರೂ, ದ್ವಿತೀಯ ವಿಕೆಟ್‌ಗೆ ಜತೆಯಾದ ಫಿನ್‌ ಅಲೆನ್‌ ಮತ್ತು ಅಂಗ್ಕ್ರಿಶ್ ರಘುವಂಶಿ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿ ಗುಜರಾತ್‌ ಬೌಲರ್‌ಗಳ ಮೈ ಚಳಿ ಬಿಡಿಸಿದರು. ರಘುವಂಶಿಗಿಂತ ಅಲೆನ್‌ ಬ್ಯಾಟಿಂಗ್‌ ತುಂಬಾ ಆಕ್ರಮಣಕಾರಿಯಾಗಿತ್ತು. ಈ ಜೋಡಿ ದ್ವಿತೀಯ ವಿಕೆಟ್‌ಗೆ 95 ರನ್‌ಗಳ ಜತೆಯಾಟ ನಡೆಸಿತು.

PBKS vs RCB: ನಾಳಿನ ಆರ್‌ಸಿಬಿ-ಪಂಜಾಬ್‌ ಪಂದ್ಯದಲ್ಲಿ ಆಟಗಾರರ ಮುಂದಿರುವ ದಾಖಲೆಗಳಿವು

ಮೈದಾನದ ಮೂಲೆ ಮೂಲೆಗೂ ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿದ ಅಲೆನ್‌ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ ಸಾಯಿ ಕಿಶೋರ್‌ ಅವರು ಅಲೆನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಬ್ರೇಕ್‌ ಹಾಕಿದರು. 35 ಎಸೆತ ಎದುರಿಸಿದ ಅಲೆನ್‌ ಬರೋಬ್ಬರಿ 10 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿ 93 ರನ್‌ ಗಳಿಸಿದರು.



ಅಲೆನ್‌ ವಿಕೆಟ್‌ ಪತನದ ಬಳಿಕ ಜತೆಯಾದ ಕ್ಯಾಮರೂನ್‌ ಗ್ರೀನ್‌ ಅವರು ರಘುವಂಶಿ ಜತೆಗೂಡಿ ಬೀಸಾಟ ನಡೆಸಿ ಮುರಿಯದ ಮೂರನೇ ವಿಕೆಟ್‌ಗೆ 108 ರನ್‌ ಕಲೆಹಾಕಿ ತಂಡದ ಮೊತ್ತವನ್ನು 250ರ ಸನಿಹಕ್ಕೇರಿಸಿದರು. ಹಾಲಿ ಆವೃತ್ತಿಯಲ್ಲಿ 5ನೇ ಅರ್ಧಶತಕ ಸಿಡಿಸಿದ ರಘುವಂಶಿ 44 ಎಸೆತಗಳಿಂದ ಅಜೇಯ 88 ರನ್‌ ಬಾರಿಸಿದರು. ಸಿಡಿದದ್ದು 7 ಸೊಗಸಾದ ಸಿಕ್ಸರ್‌ ಮತ್ತು 4 ಬೌಂಡರಿ. ಗ್ರೀನ್‌ 28 ಎಸೆತಗಳಿಂದ 52 ರನ್‌ ಗಳಿಸಿ ಅಜೇರಾಗಿ ಉಳಿದರು. ಇದೇ ವೇಳೆ ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದರು. ತಂಡದ ಪರ ರಹಾನೆ ಹೊರತುಪಡಿಸಿ ಉಳಿದ ಮೂವರು ಬ್ಯಾಟರ್‌ಗಳು ಅರ್ಧಶತಕ ಬಾರಿಸಿದರು.



ಗುಜರಾತ್‌ ಪರ ಬೌಲಿಂಗ್‌ ನಡೆಸಿದ 6 ಮಂದಿಯೂ ಸರಿಯಾಗಿ ದಂಡಿಸಿಕೊಂಡರು. ಅನುಭವಿಗಳಾದ ರಶೀದ್‌ ಖಾನ್‌(4-0-57-0) ಮತ್ತು ಮೊಹಮ್ಮದ್‌ ಸಿರಾಜ್‌(4-0-50-1) 50 ರನ್‌ ಬಿಟ್ಟುಕೊಟ್ಟು ದುಬಾರಿ ಎನಿಸಿದರು. ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡದ್ದು ಜಾಸೆನ್‌ ಹೋಲ್ಡರ್‌ ಮಾತ್ರ. ಅವರು 4 ಓವರ್‌ಗಳಲ್ಲಿ 39 ರನ್‌ ಬಿಟ್ಟುಕೊಟ್ಟರು.