ಕೋಲ್ಕತಾ, ಎ.10: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ತವರು ನೆಲವಾದ ಈಡನ್ ಗಾರ್ಡನ್ಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 3 ವಿಕೆಟ್‌ಗಳಿಂದ ಸೋತಿತು. ಈ ಐಪಿಎಲ್ ಋತುವಿನಲ್ಲಿ ಕೆಎಆರ್‌ಗೆ ಎದುರಾದ ಸತತ ಮೂರನೇ ಸೋಲು ಇದಾಗಿದೆ. ಸೋಲಿನ ಬಳಿಕ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ ಸೋಲನ್ನು ಅರಗಿಸಿಕೊಳ್ಳಲು ಕಷ್ಟಕರ ಎಂದಿದ್ದಾರೆ.
ಪಂದ್ಯದ ನಂತರ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ, ನಿರಾಶೆಗೊಂಡಂತೆ ಕಂಡುಬಂದರು. ಕೆಲವು ಫೀಲ್ಡಿಂಗ್ ತಪ್ಪುಗಳು ಸೋಲಿಗೆ ಕಾರಣವಾಯಿತು ಎಂದರು. ಇದೇ ವೇಳೆ ಅಸಾಮಾನ್ಯ ಬ್ಯಾಟಿಂಗ್ ನಡೆಸಿದ ಮುಕುಲ್ ಅವರ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದರು.
"ಇದನ್ನ ಒಪ್ಪಿಕೊಳ್ಳುವುದು ಕಷ್ಟ. ಹುಡುಗರ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ. ನಾವು ಆಡಿದ ರೀತಿಗೆ. ಮುಕುಲ್ (ಚೌಧರಿ) ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಅವರು ತಮ್ಮ ಹೊಡೆತಗಳನ್ನು ಆಡಿದ ರೀತಿ ನೋಡಿದರೆ ಅವರು ಧೈರ್ಯಶಾಲಿ. 18 ಓವರ್‌ಗಳವರೆಗೆ ನಾವು ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದೆವು ಎಂದು ನಾನು ಭಾವಿಸಿದೆ. ಕೊನೆಯ ಎರಡು ಓವರ್‌ಗಳಲ್ಲಿ ಪಂದ್ಯ ನಮ್ಮ ಕೈಬಿಟ್ಟು ಹೋಯಿತು"
"ಫೀಲ್ಡಿಂಗ್‌ನಲ್ಲಿ ಒಂದೆರಡು ಮಿಸ್‌ಫೀಲ್ಡಿಂಗ್ ಸಂಭವಿಸಿತು. ಅದನ್ನು ಹೊರತುಪಡಿಸಿ, ನಮ್ಮ ಬೌಲರ್‌ಗಳು ಅದ್ಭುತ ಕೆಲಸ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ನೋಡಿ, ನೀವು ಒಂದು ಪಂದ್ಯವನ್ನು ಸೋತಾಗ ನಾವು ಉತ್ತಮವಾಗಿ ಮಾಡಬಹುದಾದ ವಿಷಯಗಳ ಬಗ್ಗೆ ನೀವು ಸುಲಭವಾಗಿ ಯೋಚಿಸಬಹುದು. ಆದರೆ ನಾನು ಹೇಳಿದಂತೆ, ಬ್ಯಾಟಿಂಗ್ ವಿಷಯದಲ್ಲಿ, ರಘುವಂಶಿ ಮತ್ತು ನಾನು, ನಂತರ ರೋವ್‌ಮನ್ ಪೊವೆಲ್ ಮತ್ತು ಕ್ಯಾಮರೂನ್ ಗ್ರೀನ್ ಅವರ ಪಾಲುದಾರಿಕೆ ಉತ್ತಮವಾಗಿತ್ತು. ಸಮಯದ ಮಿತಿಯಿಂದಾಗಿ ನಾವು ಐದು ಫೀಲ್ಡರ್‌ಗಳ ಸೇವೆ ಕಳೆದುಕೊಳ್ಳಬೇಕಾಯಿತು. ಆದ್ದರಿಂದ ಬೌಲರ್‌ಗಳಿಗೂ ಇದು ಕಠಿಣವಾಯಿತು. ವೃತ್ತದ ಹೊರಗೆ ನಾಲ್ಕು ಫೀಲ್ಡರ್ ಹೊಂದಿರುವಾಗ ವಿಶೇಷವಾಗಿ ಕೊನೆಯ ಓವರ್ ಬೌಲಿಂಗ್ ಮಾಡುವುದು ಕಠಿಣ" ಎಂದು ರಹಾನೆ ಹೇಳಿದರು.
RR vs RCB: ಇಂದಿನ ಆರ್‌ಸಿಬಿ vs ರಾಜಸ್ಥಾನ್ ಪಂದ್ಯಕ್ಕೆ ಮಳೆ ಭೀತಿ ಇದೆಯೇ?
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 181 ರನ್ ಬಾರಿಸಿತು. ಗುರಿಯನ್ನು ಬೆನ್ನಟ್ಟಿದ ಲಖನೌ ತಂಡವು 128 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು. ಈ ಹಂತದಲ್ಲಿ ಮುಕುಲ್ ಸ್ಮರಣೀಯ ಇನಿಂಗ್ಸ್ ಕಟ್ಟಿದರು. ಅಸಾಮಾನ್ಯ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ 30 ರನ್ ಬೇಕಿತ್ತು. ಕ್ಯಾಮರೂನ್ ಗ್ರೀನ್ ಹಾಕಿದ 19ನೇ ಓವರ್‌ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಮುಕುಲ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು.