ಲಖನೌ, ಎ.27: ಐಪಿಎಲ್ 2026(IPL 2026) ರಲ್ಲಿ ಲಕ್ನೋ ಸೂಪರ್ ಜೈಂಟ್ಸ್(KKR vs LSG) ವಿರುದ್ಧದ ವಿವಾದಾತ್ಮಕ ಔಟ್ ಬಗ್ಗೆ ಪ್ರತಿಕ್ರಿಯಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ(Angkrish Raghuvanshi) ಅವರಿಗೆ ಪಂದ್ಯ ಶುಲ್ಕದ 20 ಪ್ರತಿಶತ ದಂಡ ವಿಧಿಸಲಾಗಿದೆ. ಲೀಗ್‌ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸಿಕ್ಕಿದೆ.
ಐಪಿಎಲ್ ಆಡಳಿತ ಮಂಡಳಿಯ ಅಧಿಕೃತ ಹೇಳಿಕೆಯಲ್ಲಿ, ರಘುವಂಶಿ ಅವರು ಪಂದ್ಯದ ಸಮಯದಲ್ಲಿ ಸಲಕರಣೆಗಳ ದುರುಪಯೋಗಕ್ಕೆ ಸಂಬಂಧಿಸಿದ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಹೇಳಿದೆ. ಹೇಳಿಕೆಯ ಪ್ರಕಾರ, ರಘುವಂಶಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
"ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಆಂಗ್‌ಕ್ರಿಶ್ ರಘುವಂಶಿಗೆ ಪಂದ್ಯ ಶುಲ್ಕದ 20% ದಂಡ ವಿಧಿಸಲಾಗಿದೆ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ನೀಡಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆಕೆಆರ್ ಬ್ಯಾಟಿಂಗ್ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಚೆಂಡನ್ನು ಮಿಡ್ ಆನ್ ಕಡೆ ಬಾರಿಸಿ ಒಂದು ರನ್ ಕದಿಯಲು ಯತ್ನಿಸಿದ ರಘುವಂಶಿ, ಇನ್ನೊಂದು ತುದಿಯಲ್ಲಿದ್ದ ಕ್ಯಾಮರೂನ್ ಗ್ರೀನ್ ಓಟವನ್ನು ತಿರಸ್ಕರಿಸಿದ ಕಾರಣ ಮತ್ತೆ ಕ್ರೀಸ್‌ನತ್ತ ಹಿಂದಿರುಗಿ ಓಡಿದರು. ಆದರೆ, ಕ್ಷೇತ್ರ ರಕ್ಷಕ ಶಮಿ ಎಸೆದ ಚೆಂಡು ರಘುವಂಶಿ ಕಾಲಿಗೆ ತಗುಲುತ್ತದೆ ಈ ಹಂತದಲ್ಲಿ ಲಖನೌ ತಂಡದ ನಾಯಕ ಪಂತ್ ಹಾಗೂ ಮೊಹಮ್ಮದ್ ಶಮಿ ರನೌಟ್‌ಗಾಗಿ ಮನವಿ ಮಾಡುತ್ತಾರೆ.
ಫೀಲ್ಡ್ ಅಂಪೈರ್‌ಗಳು ಮೂರನೇ ಅಂಪೈರ್ ಮೊರೆ ಹೋಗುತ್ತಾರೆ. ಅದನ್ನು ಪರಿಶೀಲಿಸಿದ ಮೂರನೇ ಅಂಪೈರ್, ರಘುವಂಶಿ ಓಡುವಾಗ ತಮ್ಮ ದಿಕ್ಕನ್ನು ಬದಲಿಸಿದ್ದಾರೆ ಎಂಬ ಕಾರಣ ನೀಡಿ ಔಟ್ ಎಂದು ತೀರ್ಪು ನೀಡುತ್ತಾರೆ. ಅಂಪೈರ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಕೆಆರ್ ತರಬೇತುದಾರ ಅಭಿಷೇಕ್ ನಾಯರ್ ಅವರು ಅಂಪೈರ್ ಜೊತೆ ಕೆಲ ಸಮಯ ವಾಗ್ವಾದ ನಡೆಸಿದರು. ಆದರೂ ಅಂಪೈರ್ ತಮ್ಮ ತೀರ್ಪನ್ನು ಬದಲಿಸಲಿಲ್ಲ. ರಘುವಂಶಿ ಮೈದಾನ ತೊರೆಯುವಾಗ ಬೌಂಡರಿ ಲೈನ್‌ಗೆ ಬ್ಯಾಟ್‌ನಿಂದ ಜೋರಾಗಿ ಬಡಿದು ಆ ಬಳಿಕ ಹೆಲ್ಮಟ್ ಎಸೆದು ಆಕ್ರೋಶ ಹೊರಹಾಕಿದರು. ಇದೇ ಕಾರಣಕ್ಕೆ ಅವರು ದಂಡಕ್ಕೆ ಗುರಿಯಾದರು.
ಪಂದ್ಯದಲ್ಲಿ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಲಖನೌ ನಾಟಕೀಯ ಕುಸಿತ ಕಂಡು ಬ್ಯಾಟಿಂಗ್ ವೈಫಲ್ಯ ಅನುಭವಿಸಿ 8 ವಿಕೆಟ್‌ಗೆ 155 ರನ್ ಗಳಿಸಿ ಪಂದ್ಯ ಟೈ ಮಾಡಿಕೊಂಡಿತು. ಕೊನೆ ಎಸೆತಕ್ಕೆ 7 ರನ್ ಬೇಕಿದ್ದಾಗ ಶಮಿ ಸಿಕ್ಸರ್ ಸಿಡಿಸಿ ಪಂದ್ಯ ಟೈ ಮಾಡಿಕೊಂಡರು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ 3 ಎಸೆತದಲ್ಲಿ ಕೇವಲ 1 ರನ್ ಗಳಿಸಿ 2 ವಿಕೆಟ್(ಆಲೌಟ್) ಕಳೆದುಕೊಂಡಿತು. 2 ರನ್ ಗುರಿ ಪಡೆದ ಕೆಕೆಆರ್‌ಗೆ ರಿಂಕು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವು ತಂದುಕೊಟ್ಟರು.