ನವದೆಹಲಿ, ಫೆ.13: ವಿಶ್ವದ ನಂ. 1 ಟಿ20ಐ ತಂಡವಾದ ಭಾರತ, ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup 2026) 2026ರ ಗ್ರೂಪ್ 'ಎ' ಪಂದ್ಯದಲ್ಲಿ ಪಾಕಿಸ್ತಾನ(India vs Pakistan)ವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯವು ಭಾನುವಾರ (ಫೆಬ್ರವರಿ 15) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಲಿ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿವೆ. ಭಾನುವಾರ ಒಂದು ತಂಡ ಸಹಜವಾಗಿಯೇ ಸೋಲು ಕಾಣಲಿದೆ. ಪಂದ್ಯದ ವಿಜೇತರು ಸೂಪರ್ 8 ರ ಹಂತಕ್ಕೆ ಅರ್ಹತೆ ಪಡೆಯಲ್ಲಿದ್ದಾರೆ.
ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ದೊಡ್ಡ ಪಂದ್ಯಕ್ಕಾಗಿ, ಭಾರತ ತನ್ನ ಆಡುವ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಡುವ ಸಾಧ್ಯತೆ ಇದೆ. ಕೊಲಂಬೊದಲ್ಲಿ ಸ್ಪಿನ್ ಪಿಚ್ ಇರುವ ಕಾರಣ ಹೆಚ್ಚುವರಿ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಿದೆ. ಆದಾಗ್ಯೂ, ಅವರಿಗೆ ಜಾಗ ಬಿಡುವವರು ಯಾರು ಮಾಡಿಕೊಡುತ್ತಾರೆ ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿದೆ.
ಸದ್ಯಕ್ಕೆ ತಂಡದ ಪರ ಪ್ರರ್ಶನವನ್ನು ನೋಡುವಾಗ ರಿಂಕು ಸಿಂಗ್ ತಮ್ಮ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಕೈಬಿಡುವ ಸಾಧ್ಯತೆ ಅಧಿಕ. ಇನ್ನೊಂದೆಡೆ ಭಾರತೀಯ ಬ್ಯಾಟರ್‌ಗಳು ಸ್ಪಿನ್ ದಾಳಿಗೆ ತಿಣುಕಾಡುತ್ತಿದ್ದಾರೆ. ಕುಲ್ದೀಪ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಸ್ಥಳಾವಕಾಶ ಕಲ್ಪಿಸಲು ಅರ್ಶ್‌ದೀಪ್ ಮತ್ತು ರಿಂಕು ಇಬ್ಬರನ್ನೂ ಬೆಂಚ್‌ಗೆ ಕೈಬಿಡುವ ಸಾಧ್ಯತೆಯೂ ಇದೆ.
ಪಾಕ್ ವಿರುದ್ಧ ಆಡುತ್ತಾರಾ ಅಭಿಷೇಕ್ ಶರ್ಮಾ?; ಸೂರ್ಯಕುಮಾರ್ ಹೇಳಿದ್ದೇನು?
ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಪರ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯವನ್ನು ಆಡಿದ್ದ ಸುಂದರ್ ಕೂಡ ಆಯ್ಕೆಗೆ ಲಭ್ಯವಿದೆ. ಸುಂದರ್ ಅವರನ್ನು ಆಡುವ XI ನಲ್ಲಿ ಸೇರಿಸಿಕೊಳ್ಳುವುದರಿಂದ ಭಾರತಕ್ಕೆ ಮತ್ತೊಂದು ಸ್ಪಿನ್ ಬೌಲಿಂಗ್ ಆಯ್ಕೆ ಜತೆಗೆ ಬ್ಯಾಟಿಂಗ್ ಕೂಡ ಸಿಕ್ಕಂತಾಗುತ್ತದೆ.
ಹೊಟ್ಟೆನೋವಿನಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಭಾನುವಾರ ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಡುವುದು ಅನುಮಾನ.ನಾಯಕ ಸೂರ್ಯಕುಮಾರ್ ಯಾದವ್, "ಅಭಿಷೇಕ್ ಒಂದು ಅಥವಾ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆಯಬಹುದು. ಅವರು ಇನ್ನೂ ಚೇತರಿಕೆ ಕಂಡಿಲ್ಲ" ಎಂದು ಹೇಳಿದರು. ಹೀಗಾಗಿ ಭಾನುವಾರದ ಪಾಕಿಸ್ತಾನ ವಿರುದ್ಧದ ಪಂದ್ಯದಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ. 24 ವರ್ಷದ ಅಭಿಷೇಕ್ ಮೂರು ಬಾರಿ ಪಾಕಿಸ್ತಾನವನ್ನು ಎದುರಿಸಿದ್ದು, 189 ರ ಸ್ಟ್ರೈಕ್ ರೇಟ್‌ನಲ್ಲಿ 110 ರನ್ ಗಳಿಸಿದ್ದಾರೆ.