ಟೋಕಿಯೊ, ನ.13: ಜಪಾನ್ ಮಾಸ್ಟರ್ಸ್ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿರುವ ಲಕ್ಷ್ಯ ಸೇನ್, ಜಪಾನ್ನ ಯುಶಿ ತನಕಾ ಅವರನ್ನು ನೇರ ಗೇಮ್ಗಳಲ್ಲಿ ಸೋಲಿಸುವ ಮೂಲಕ ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಸೇನ್ ಇಂಡೋನೇಷ್ಯಾದ ಅಲ್ವಿ ಫರ್ಹಾನ್ ಅವರನ್ನು ಎದುರಿಸಲಿದ್ದಾರೆ.
ಭಾರತೀಯ ಕಾಲಮಾನ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಭಾರತೀಯ ಆಟಗಾರ, ತವರು ನೆಲದ ಆಟಗಾರನಿಂದ ಎದುರಾದ ಕಠಿಣ ಸವಾಲನ್ನು ಮೆಟ್ಟಿ ನಿಂತು, 40 ನಿಮಿಷಗಳಲ್ಲಿ 21-16, 21-15 ಅಂತರದ ಜಯವನ್ನು ದಾಖಲಿಸಿದರು.
ಮೊದಲ ಗೇಮ್ನಲ್ಲಿ ವಿರಾಮದ ವೇಳೆಗೆ ಸೇನ್ 11-8 ಅಂತರದ ಮುನ್ನಡೆ ಸಾಧಿಸಿದ್ದರು. ವಿರಾಮದ ಬಳಿಕ ತನಕಾ ಅಲ್ಪ ಮಟ್ಟದ ಚೇತರಿಕೆ ಕಂಡರೂ, ಸರಿಯಾದ ಸಮಯದಲ್ಲಿ ಭಾರತೀಯ ಆಟಗಾರ ತಮ್ಮ ಆಟದ ತೀವ್ರತೆಯನ್ನು ಹೆಚ್ಚಿಸಿಕೊಂಡು 21-16 ಅಂತರದಿಂದ ಗೇಮ್ ಅನ್ನು ತಮ್ಮದಾಗಿಸಿಕೊಂಡರು.
39ರ ಹರೆಯದಲ್ಲೂ ರೋಹಿತ್ ಸ್ಟನ್ನಿಂಗ್ ಕ್ಯಾಚ್; ಕ್ರಿಕೆಟ್ ಅಭಿಮಾನಿಗಳು ಫಿದಾ
ಈ ಟೂರ್ನಿಯುದ್ದಕ್ಕೂ ಸೇನ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಚೈನೀಸ್ ತೈಪೆಯ ಚಿ ಯು ಜೆನ್ ವಿರುದ್ಧ 21-19, 21-18 ಅಂತರದ ಗೆಲುವಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿದರು. ನಂತರ ಎರಡನೇ ಸುತ್ತಿನಲ್ಲಿ ಚೀನಾದ ಡಾಂಗ್ ಟಿಯಾನ್ ಯಾವೊ ಅವರನ್ನು ಕೇವಲ 35 ನಿಮಿಷಗಳಲ್ಲಿ 21-8, 21-14 ಅಂತರದಿಂದ ಸೋಲಿಸಿದರು.
ದಿನದ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಕಿದಂಬಿ ಶ್ರೀಕಾಂತ್ ಅವರು ಜಪಾನ್ನ ಕೋಕಿ ವಟನಾಬೆ ವಿರುದ್ಧ 22-24, 15-21 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು. ಉಭಯ ಆಟಗಾರರ ಈ ಹೋರಾಟ 41 ನಿಮಿಷಗಳ ತನಕ ಸಾಗಿತು.
ಕುಮಾಮೊಟೊದಲ್ಲಿ, ಶ್ರೇಯಾಂಕ ರಹಿತರಾದ ಈ ಭಾರತೀಯ ಆಟಗಾರ ಉತ್ತಮ ಪ್ರದರ್ಶನ ನೀಡಿದರು. ಅವರು ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ಅವರನ್ನು ಸೋಲಿಸಿದರು. ನಂತರ ಗುರುವಾರ ನಡೆದ ಮೂರು ಗೇಮ್ಗಳ ಹೋರಾಟದಲ್ಲಿ, ಐದನೇ ಶ್ರೇಯಾಂಕದ ಹಾಗೂ ವಿಶ್ವ ಕ್ರಮಾಂಕದಲ್ಲಿ 8ನೇ ಸ್ಥಾನದಲ್ಲಿರುವ ಕೊಡೈ ನಾರಾವೊಕಾ ಅವರನ್ನು ಮಣಿಸುವ ಮೂಲಕ ಟೂರ್ನಿಯ ಅಚ್ಚರಿಯ ಫಲಿತಾಂಶವೊಂದಕ್ಕೆ ಕಾರಣರಾದರು.