ನವದೆಹಲಿ, ಎ.26: ಶನಿವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದ ವೇಗಿ ಲುಂಗಿ ಎನ್‌ಗಿಡಿ(Lungi Ngidi injury update) ಅವರ ಆರೋಗ್ಯ ಸ್ಥಿತಿ ಬಗ್ಗೆ ಐಪಿಎಲ್ ಅಧಿಕೃತ ಮಾಹಿತಿ ಪ್ರಕಟಿಸಿದೆ.
'ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲುಂಗಿಸಾನಿ ಎನ್‌ಗಿಡಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ತಲೆಗೆ ಪೆಟ್ಟು ಬಿದ್ದಿತ್ತು. ತಲೆನೋವು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎನ್‌ಗಿಡಿ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ" ಎಂದು ಐಪಿಎಲ್ ತಮ್ಮ ಸಾಮಾಜಿಕ ಮಾಧ್ಯಮ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಪಂಜಾಬ್ ತಂಡ 265 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟುತ್ತಿದ್ದ ವೇಳೆ ಮೂರನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಬಾರಿಸಿದ ಚೆಂಡು ಮೇಲಕ್ಕೆ ಚಿಮ್ಮಿತು. ಮಿಡ್-ಆಫ್‌ನಲ್ಲಿದ್ದ ಲುಂಗಿ ಎನ್‌ಗಿಡಿ ಕ್ಯಾಚ್ ಹಿಡಿಯಲು ಹಿಂದಕ್ಕೆ ಓಡಿದರು. ಈ ವೇಳೆ ನಿಯಂತ್ರಣ ತಪ್ಪಿ ಹಿಂದಕ್ಕೆ ಬಲವಾಗಿ ಬಿದ್ದರು. ಬೀಳುವ ರಭಸಕ್ಕೆ ಅವರ ತಲೆ ನೇರವಾಗಿ ನೆಲಕ್ಕೆ ಅಪ್ಪಳಿಸಿತು. ಬಿದ್ದ ತಕ್ಷಣ ತಲೆ ಹಿಡಿದು ನೋವಿನಿಂದ ಚಡಪಡಿಸಿದರು. ಮೈದಾನಕ್ಕೆ ಆ್ಯಂಬುಲೆನ್ಸ್ ಆಗಮಿಸಿದ ವೇಳೆ ಪಂದ್ಯ ನೋಡುತ್ತಿದ್ದ ಅಭಿಮಾನಿಗಳಲ್ಲಿ ಒಂದು ಕ್ಷಣ ಆತಂಕ ಹೆಚ್ಚಾಗಿತ್ತು. ಸದ್ಯ ಅವರು ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿರುವ ಕಾರಣ ಕ್ರಿಕೆಟ್ ಅಭಿಮಾನಿಗಳ ಆತಂಕ ದೂರವಾಗಿದೆ.
ಶನಿವಾರ ಮಧ್ಯಾಹ್ನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆದಿದ ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್. ರಾಹುಲ್ (151 ರನ್) ಅವರ ಸೊಗಸಾದ ಶತಕದಿಂದಾಗಿ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 264 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಆರಂಭಿಕ ಜೋಡಿ ಪ್ರಭಸಿಮ್ರನ್ ಸಿಂಗ್ (76 ರನ್) ಮತ್ತು ಪ್ರಿಯಾಂಶ್ ಆರ್ಯ(73) ಅರ್ಧಶತಕದ ಬಲದಿಂದ ಆರು ವಿಕೆಟ್‌ಗಳ ವಿಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಟೂರ್ನಿಯಲ್ಲಿ ಅಜೇಯವಾಗಿಯೂ ಉಳಿಯಿತು.
2024ರಲ್ಲಿ ಪಂಜಾಬ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಎದುರು 262 ರನ್‌ಗಳ ಗುರಿಯನ್ನು ಯಶಸ್ವಿ ಯಾಗಿ ಸಾಧಿಸಿದ್ದು ಇದುವರೆಗಿನ ಟಿ20 ಕ್ರಿಕೆಟ್ ಚೇಸಿಂಗ್ ದಾಖಲೆಯಾಗಿತ್ತು. ತನ್ನ ದಾಖಲೆಯನ್ನು ಪಂಜಾಬ್ ತಂಡವು ಇಲ್ಲಿ ಮತ್ತಷ್ಟು ಉತ್ತಮಪಡಿಸಿಕೊಂಡಿತು. ಒಟ್ಟು 13 ಅಂಕ ಗಳಿಸಿರುವ ಶ್ರೇಯಸ್ ಬಳಗವು ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿತು. ತಂಡವು ಲೀಗ್ ಹಂತದಲ್ಲಿ ಇನ್ನೂ ಏಳು ಪಂದ್ಯಗಳನ್ನು ಆಡಬೇಕಿದೆ.