ಕನ್ಸಾಸ್, ಜೂ.17: ದಿಗ್ಗಜ ಲಿಯೋನಲ್ ಮೆಸ್ಸಿ(Lionel Messi) ಅವರ ಹ್ಯಾಟ್ರಿಕ್ ಗೋಲುಗಳ ಕಮಾಲ್‌ನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್(FIFA World Cup) ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಶುಭಾರಂಭ ಮಾಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಅಲ್ಜೀರಿಯಾ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು. 6ನೇ ವಿಶ್ವಕಪ್ ಆಡಲಿಳಿದ ಮೆಸ್ಸಿ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ತೋರುವ ಮೂಲಕ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ಒದಗಿಸಿದರು.
2022ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಹಿಂದಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಫುಟ್ಬಾಲ್ ಇತಿಹಾಸದಲ್ಲೇ ಅತಿ ದೊಡ್ಡ ಅಚ್ಚರಿಯ ಫಲಿತಾಂಶ ಎನ್ನುವಂತೆ ಸೌದಿ ಅರೇಬಿಯಾ ವಿರುದ್ಧ 2-1 ಗೋಲುಗಳ ಅಂತರದ ಸೋಲು ಕಂಡಿತ್ತು. ಆದರೆ ಆ ಬಳಿಕ ಅಸಾಧಾರಣ ಪ್ರದರ್ಶನದ ಮೂಲಕ ಪ್ರಶಸ್ತಿ ಗೆದ್ದು ಬೀಗಿತ್ತು. ಈ ಬಾರಿ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಸಂದೇಶವೊಂದನ್ನು ನೀಡಿದೆ.
ಮೆಸ್ಸಿಗೆ ಇದು 200ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಮಾತ್ರವಲ್ಲದೆ 6ನೇ ವಿಶ್ವಕಪ್. ಈ ಸ್ಮರಣಿಯ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಗೋಲು ಬಾರಿಸಿ ಪಂದ್ಯವನ್ನು ಮತ್ತಷ್ಟು ಸ್ಮರಣೀಯವಾಗಿಸಿದರು. ಆರಂಭದಿಂದಲೇ ಮುನ್ನುಗ್ಗಿದ ಅವರು ಪಂದ್ಯದ 17ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದರು. ಇದಾಗಿ 60 ಮತ್ತು 76ನೇ ನಿಮಿಷದಲ್ಲಿ ಕ್ರಮವಾಗಿ ಮತ್ತೆರಡು ಗೋಲು ಬಾರಿಸಿದರು.
ಎಂಬಪ್ಪೆ ಅವಳಿ ಗೋಲು; ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ 3-1 ಅಂತರದ ಗೆಲುವು
ಅರ್ಜೆಂಟೀನಾ ತಂಡಕ್ಕೆ, ಈ ಗೆಲುವು ವೈಯಕ್ತಿಕ ಮೈಲಿಗಲ್ಲುಗಳನ್ನು ಮೀರಿದ ಮಹತ್ವದ್ದಾಗಿತ್ತು. ಮೂರು ಬಾರಿಯ ವಿಶ್ವ ಚಾಂಪಿಯನ್‌ಗಳು ಹಾಲಿ ಚಾಂಪಿಯನ್ ಆಗಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿತು. ಈ ಹಿಂದೆ ಟ್ರೋಫಿಯನ್ನು ಎತ್ತಿಹಿಡಿದ ನಂತರ 1982 ಮತ್ತು 1990 ಎರಡರಲ್ಲೂ ತಮ್ಮ ಮೊದಲ ಪಂದ್ಯಗಳನ್ನು ಸೋತಿದ್ದರು.
ಮೂರು ಗೋಲು ಬಾರಿಸಿದ ಮೆಸ್ಸಿ ಫಿಫಾ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಬಾರಿಸಿದ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಅವರ ಸಾರ್ವಕಾಲಿಕ ದಾಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ತಲಾ 16 ಗೋಲು ಬಾರಿಸಿದ್ದಾರೆ. ಮೆಸ್ಸಿ ಇನ್ನೊಂದು ಗೋಲು ಬಾರಿಸಿದರೆ ದಾಖಲೆ ತನ್ನ ಹೆಸರಿಗೆ ಬರೆಯಲಿದ್ದಾರೆ. ಮಿರೋಸ್ಲಾವ್ ಕ್ಲೋಸ್ 2016ರಲ್ಲಿ ಅವರು ನಿವೃತ್ತಿಯಾಗಿದ್ದಾರೆ.
ಈ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ 2006, ಜೂ.16ರಂದು ಮೆಸ್ಸಿ ಫಿಫಾ ವಿಶ್ವಕಪ್ ಪದಾರ್ಪಣ ಪಂದ್ಯ ಆಡಿದ ದಿನದಂದೇ ಅವರು ಹ್ಯಾಟ್ರಿಕ್ ಗೋಲು ಬಾರಿಸಿದರು.
ರೊನಾಲ್ಡೊ ದಾಖಲೆ ಪತನ
ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಮೆಸ್ಸಿ(38 ವರ್ಷ ಮತ್ತು 357 ದಿನ) ಪಾಲಾಯಿತು. ಇದಕ್ಕೂ ಮುನ್ನ ದಾಖಲೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಹೆಸರಿನಲ್ಲಿತ್ತು. 2018 ರಲ್ಲಿ ಅವರು ಹ್ಯಾಟ್ರಿಕ್ ಗೋಲು ಗಳಿಸಿದಾಗ 33 ವರ್ಷ ಮತ್ತು 130 ದಿನಗಳಾಗಿದ್ದವು.