ನವದೆಹಲಿ: ಅಕ್ರಮ ಬುಕ್ಕಿಗಳು ಮತ್ತು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ(Match fixing allegations) ಆರು ಜನ ಆರೋಪಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು 2022ರಲ್ಲಿ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್(Supreme Courta)ನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮಧ್ಯ ಪ್ರವೇಶಿಸಲು ಬಿಸಿಸಿಐ(BCCI)ಗೆ ಅನುಮತಿ ನೀಡಲಾಗಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯಾ ಬಾಗಚಿ ಅವರನ್ನೊಳಗೊಂಡ ನ್ಯಾಯಪೀಠವು ಈ ಕುರಿತಂತೆ ಇದೇ 16 ರಂದು ಬಿಸಿಸಿಐಗೆ ನ್ಯಾಯಾಲಯಕ್ಕೆ ಸಹಾಯ ಮಾಡಲು ಅವಕಾಶ ಕಲ್ಪಿಸಿದೆ. ಪ್ರತಿವಾದಿಗಳು ಮುಂದಿನ ನಾಲ್ಕು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ತಿಳಿಸಿದೆ. ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ IPL 2026: ಐಪಿಎಲ್ 2026 ಹರಾಜಿಗೂ ಮುನ್ನ ಧೋನಿಯನ್ನು ಬಿಡುಗಡೆ ಮಾಡಲು ಮುಂದಾದ ಸಿಎಸ್‌ಕೆ
‘ಮ್ಯಾಚ್ ಫಿಕ್ಸಿಂಗ್ ಕೃತ್ಯವು ಸ್ಪಷ್ಟವಾಗಿ ವಂಚನೆಯ ಅಪರಾಧವಾಗಿದೆ. ಇದರಲ್ಲಿ ವಂಚನೆ ಎಸಗುವ ಎಲ್ಲ ಅಂಶಗಳೂ ಒಳಗೊಂಡಿವೆ. ಅವುಗಳಲ್ಲಿ ಅಪ್ರಾಮಾಣಿಕತೆ, ಉದ್ದೇಶಪೂರ್ವಕ ಪ್ರಚೋದನೆ, ಹಾನಿಯನ್ನು ಉಂಟುಮಾಡುವ ದುರುದ್ದೇಶಗಳಿವೆ. ಆದ್ದರಿಂದ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 417ರ ಅಡಿಯಲ್ಲಿ ವಂಚನೆ ಆರೋಪ ಹೊರಿಸಬಹುದು’ ಎಂದು ಬಿಸಿಸಿಐ ವಾದಿಸಿದೆ.
ಏನಿದು ಪ್ರಕರಣ?
2018 ಮತ್ತು 2019ರಲ್ಲಿ ನಡೆದಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಗಳ ಕೆಲವು ಪಂದ್ಯಗಳಲ್ಲಿ ಮೋಸದಾಟ ನಡೆದ ಆರೋಪಗಳು ಕೇಳಿಬಂದಿದ್ದವು. ಅದರಲ್ಲಿ ಇಬ್ಬರು ಆಟಗಾರರು, ತಂಡವೊಂದರ ಮಾಲೀಕ, ತಂಡದ ಉಸ್ತುವಾರಿ, ಒಬ್ಬ ಕೋಚ್, ಒಬ್ಬ ಬುಕ್ಕಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಒಬ್ಬ ಸದಸ್ಯರ ಮೇಲೆ ಸೆಕ್ಷನ್ 420 ಮತ್ತು 120 ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣವನ್ನು 2022ರ ಜನವರಿ 10ರಂದು ಹೈಕೋರ್ಟ್ ರದ್ದುಗೊಳಿಸಿತ್ತು.