ನವದೆಹಲಿ, ಡಿ.18: ಲಿಯೋನೆಲ್ ಮೆಸ್ಸಿಯವರ ಬಹುನಿರೀಕ್ಷಿತ G.O.A.T. ಭಾರತ ಪ್ರವಾಸವು ದೇಶದ ಕೆಲವು ಪ್ರಸಿದ್ಧ ಕ್ರೀಡಾಪಟುಗಳನ್ನು ಅಪರೂಪದ ಮತ್ತು ಸ್ಮರಣೀಯ ವಿನಿಮಯಕ್ಕಾಗಿ ಒಟ್ಟುಗೂಡಿಸಿತು. ನವದೆಹಲಿಯಲ್ಲಿ ನಡೆದ ಪ್ರಚಾರದ ಫೋಟೋಶೂಟ್ ಸಂದರ್ಭದಲ್ಲಿ, ಮೆಸ್ಸಿ ಭಾರತೀಯ ಕ್ರಿಕೆಟಿಗ ಕುಲದೀಪ್ ಯಾದವ್, ಪ್ಯಾರಾ ಜಾವೆಲಿನ್ ಚಿನ್ನದ ಪದಕ ವಿಜೇತ ಸುಮಿತ್ ಆಂಟಿಲ್ ಮತ್ತು ಪ್ಯಾರಾ ಹೈಜಂಪರ್ ನಿಶಾದ್ ಕುಮಾರ್ ಮತ್ತು ಇತರ ಕ್ರೀಡಾ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು.
ಸೋಮವಾರ ನವದೆಹಲಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಯ್ ಶಾ ಅವರು ಉಡುಗೊರೆಯಾಗಿ ನೀಡಿದ ಭಾರತೀಯ ಕ್ರಿಕೆಟ್ ಜೆರ್ಸಿಯನ್ನು ಧರಿಸಿದ ಮೆಸ್ಸಿ ಪ್ರಧಾನ ಆಕರ್ಷಣೆ ಎನಿಸಿದ್ದರು. ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮೆಸ್ಸಿಯನ್ನು ಕಂಡ ಕುಲ್‌ದೀಪ್ ಯಾದವ್ ಒಂದು ಕ್ಷಣ ದಂಗಾದರು.
ಪ್ಯಾರ ಅಥ್ಲೀಟ್ ಸುಮಿತ್ ಆಂಟಿಲ್ ಮೆಸ್ಸಿಗೆ ತನ್ನನ್ನು ಪರಿಚಯಿಸಿಕೊಂಡು ಸಹಿ ಮಾಡಿದ ಜಾವೆಲಿನ್ ಪಡೆದರೆ, ನಿಶಾದ್ ಕುಮಾರ್ ತಮ್ಮ ಸ್ಪೈಕ್‌ಗಳಿಗೆ ಸಹಿ ಹಾಕಿಸಿಕೊಂಡರು. ಭಾರತೀಯ ಕ್ರಿಕೆಟ್‌ನಲ್ಲಿ ಮೆಸ್ಸಿ ಮತ್ತು ಅವರ ಹಿಂದಿನ ಕ್ಲಬ್ ಬಾರ್ಸಿಲೋನಾದ ಅತಿದೊಡ್ಡ ಅಭಿಮಾನಿಗಳಲ್ಲಿ ಒಬ್ಬರಾದ ಕುಲದೀಪ್ ಯಾದವ್ ಕೂಡ ನೆಚ್ಚಿನ ಆಟಗಾರ ಆಟೋಗ್ರಾಫ್ ಪಡೆದುಕೊಂಡರು.
ಅಡಿಡಾಸ್ ಇಂಡಿಯಾ ಆಯೋಜಿಸಿದ್ದ ಈ ಕೂಟದಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ವೇಗಿ ರೇಣುಕಾ ಸಿಂಗ್ ಠಾಕೂರ್ ಮತ್ತು ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಕೂಡ ಭಾಗವಹಿಸಿದ್ದರು, ಅವರು ಮೆಸ್ಸಿ ಮತ್ತು ಅವರ ಅರ್ಜೆಂಟೀನಾ ತಂಡದ ಸಹ ಆಟಗಾರ ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಸ್ಮರಣಾರ್ಥ ಛಾಯಾಚಿತ್ರ ತೆಗೆಸಿಕೊಳ್ಳಲು ಗುಂಪಿನಲ್ಲಿ ಸೇರಿಕೊಂಡರು.
ಇದನ್ನೂ ಓದಿ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಮಧ್ಯೆ ಭಾರತ-ದಕ್ಷಿಣ ಆಫ್ರಿಕಾ ಟಿ20 ಆತಿಥ್ಯದ ಕಿತ್ತಾಟ
G.O.A.T. ಆಫ್ ಇಂಡಿಯಾ ಪ್ರವಾಸವು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿ ಎಂಬ ನಾಲ್ಕು ನಗರಗಳಲ್ಲಿ ನಡೆಯಿತು. ಭೇಟಿ ವೇಳೆ ನೆಚ್ಚಿನ ಆಟಗಾರನನ್ನು ಅವರ ಅಭಿಮಾನಿಗಳು ಕಣ್ತುಂಬಿ ಕೊಂಡರು. ಕ್ರಿಕೆಟ್ ದಿಗ್ಗಜರು, ಬಾಲಿವುಡ್ ತಾರೆಯರು ಸೇರಿದಂತೆ ರಾಜಕೀಯ ಗಣ್ಯರು ಸಹ ಮೆಸ್ಸಿಯನ್ನು ಭೇಟಿಯಾದರು.
ಗೋಟ್ ಪ್ರವಾಸದಲ್ಲಿ ಅತ್ಯುತ್ತಮ ಆತಿಥ್ಯ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದ ಮೆಸ್ಸಿ, 'ಭಾರತದಲ್ಲಿ ಫುಟ್‌ಬಾಲ್‌ಗೆ ಉಜ್ವಲ ಭವಿಷ್ಯವಿದೆ' ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.