ಮುಂಬಯಿ, ಮೇ 24: ಪ್ಲೇ ಆಫ್ ಪ್ರವೇಶದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಯಶಸ್ಸು ಕಂಡಿದೆ. ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಗಲು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್ ಅಂತರದ ಗೆಲುವು ಸಾಧಿಸುವ ಮೂಲಕ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿತು. ರಾಜಸ್ಥಾನ್ ಗೆಲುವಿನಿಂದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡ ಹೊರಬಿದ್ದಿತು. ರಿಯಾನ್ ಪರಾಗ್ ಪಡೆ ಮೇ 27 ರಂದು ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಆರಂಭಿಕ ಹಂತದಲ್ಲಿ ಪಂದ್ಯದಲ್ಲಿ ಹಿಡಿತ ಸಾಧಿಸಿದರೂ ಆ ಬಳಿಕ ಬೌಲರ್‌ಗಳು ಲಯ ತಪ್ಪಿದರು. ರಾಜಸ್ಥಾನ್ ಪರ ಕೆಲ ಕ್ರಮಾಂಕದಲ್ಲಿ ಬೌಲರ್‌ಗಳು ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 8 ವಿಕೆಟ್‌ಗೆ 205ಕ್ಕೆ ತಲುಪಿಸಿದರು. ಗುರಿ ಬೆನ್ನಟ್ಟಿದ ಮುಂಬೈ 9 ವಿಕೆಟ್‌ಗೆ 175 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಚೇಸಿಂಗ್ ವೇಳೆ ಮುಂಬೈ ಆರಂಭದಲ್ಲೇ ಆಘಾತ ಎದುರಿಸಿತು. ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ರೋಹಿತ್ ಶರ್ಮ ಗೋಲ್ಡನ್ ಡಕ್ ಆದರು. ಈ ವಿಕೆಟ್ ಜೋಫ್ರ ಆರ್ಚರ್ ಪಾಲಾಯಿತು. ಇದಾದ ಬಳಿಕ ರಯಾನ್ ರಿಕೆಲ್ಟನ್(12) ಮತ್ತು ನಮನ್ ಧೀರ್(6) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು.
ತಂಡ 24 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ವಿಲ್ ಜಾಕ್ಸ್ ಸೇರಿಕೊಂಡು ಸಣ್ಣ ಬ್ಯಾಟಿಂಗ್ ಹೋರಾಟ ನಡೆಸುವ ಮೂಲಕ ತಂಡಕ್ಕೆ ನೆರವಾದರು. ಹಾಲಿ ಆವೃತ್ತಿಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ಸೂರ್ಯಕುಮಾರ್ ಯಾದವ್ ಕೊನೆಯ ಲೀಗ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ವಿಲ್ ಜಾಕ್ಸ್(33) ವಿಕೆಟ್ ಪತನದ ಬಳಿಕ ಸೂರ್ಯ ಜತೆಗೂಡಿದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. 34 ರನ್ ಗಳಿಸಿದ ವೇಳೆ ಜೋಫ್ರ ಆರ್ಚರ್ ವಿಕೆಟ್ ಕಿತ್ತು ಪೆವಿಲಿಯನ್‌ಗೆ ಅಟ್ಟಿದರು. ಅಂತಿವಾಗಿ ಸೂರ್ಯಕುಮಾರ್ 4 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿ 60 ರನ್ ಬಾರಿಸಿದರು.
ರಾಜಸ್ಥಾನ್ ಪರ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಜೋಫ್ರಾ ಆರ್ಚರ್ 4 ಓವರ್‌ನಲ್ಲಿ ಕೇಲವ 17 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ ಮತ್ತು ಯಶ್ ರಾಜ್ ಪುಂಜಾ ತಲಾ 2 ವಿಕೆಟ್ ಕಿತ್ತರು.
ರಾಜಸ್ಥಾನ್‌ಗೆ ನೆರವಾದ ಬಾಲಂಗೋಚಿಗಳು
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ 6 ಎಸೆತಗಳಿಂದ ಕೇವಲ 4 ರನ್ ಗಳಿಸಿ ಬೇಗನೆ ವಿಕೆಟ್ ಕಳೆದುಕೊಂಡರು. ಯಶಸ್ವಿ ಜೈಸ್ವಾಲ್ ಕೂಡ ಬಡಬಡನೆ ಮೂರು ಸಿಕ್ಸರ್ ಬಾರಿಸಿ 27 ರನ್‌ಗೆ ಆಟ ಮುಗಿಸಿದರು. ನಾಯಕ ರಿಯಾನ್ ಪರಾಗ್(14), ಧ್ರುವ್ ಜುರೆಲ್(38), ಡೊನೊವನ್ ಫೆರೀರಾ(18) ಸತತವಾಗಿ ವಿಕೆಟ್ ಕಳೆದುಕೊಂಡರು. 15 ಓವರ್ ಆಗುವಾಗ ತಂಡ 139ಕ್ಕೆ 6 ವಿಕೆಟ್ ಕಳೆದುಕೊಂಡು 150ರ ಗಡಿ ದಾಟುವುದು ಕಷ್ಟ ಎನ್ನು ಸ್ಥಿತಿಯಲ್ಲಿತ್ತು.
ಸನ್‌ರೈಸರ್ಸ್ ಎಂದಿಗೂ ಇನ್‌ಸ್ಟಾಗ್ರಾಮ್‌ನಲ್ಲಿ ನನ್ನನ್ನು ಅನ್‌ಬ್ಲಾಕ್ ಮಾಡಲ್ಲ; ಡೇವಿಡ್ ವಾರ್ನರ್
ಈ ವೇಳೆ ಯಾರೂ ಊಹೆ ಮಾಡದಂತೆ ಬಿರುಸಿನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ವೇಗಿ ಜೋಫ್ರ ಆರ್ಚರ್ ಮುಂಬೈ ಬೌಲರ್‌ಗಳ ಮೇಲೆರಗಿ ಕೇವಲ 15 ಎಸೆತಗಳಿಂದ 32 ರನ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಮತ್ತೊಂದು ತುದಿಯಲ್ಲಿ ಶ್ರೀಲಂಕಾದ ಆಲ್‌ರೌಂಡರ್ ದಶುನ್ ಶನಕ(29) ಮತ್ತು ಕೊನೆಯ ಹಂತದಲ್ಲಿ ನಾಂಡ್ರೆ ಬರ್ಗರ್ 3 ಎಸೆತಗಳಿಂದ ಅಜೇಯ 10 ರನ್ ಬಾರಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.