ಲಾಹೋರ್, ಸೆ.14: ರಾಷ್ಟ್ರೀಯ ಸೈಬರ್ ಅಪರಾಧ ತನಿಖಾ ಸಂಸ್ಥೆ (NCCIA) ತಮಗೆ ಜಾರಿಗೊಳಿಸಿದ ಸಮನ್ಸ್ ವಿರುದ್ಧ ಪಾಕಿಸ್ತಾನದ ವಿಕೆಟ್-ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಲಾಹೋರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ವಾರ ರಿಜ್ವಾನ್ ಈ ಸಂಸ್ಥೆಯ ಮುಂದೆ ಹಾಜರಾಗಿದ್ದರು. ಆದರೆ ಇದೀಗ ಅವರು ತನಿಖೆಯ ಆಧಾರ ಹಾಗೂ ತಮ್ಮನ್ನು ಸಮನ್ಸ್ ಮೂಲಕ ಕರೆಸುವ ಸಂಸ್ಥೆಯ ಅಧಿಕಾರವ್ಯಾಪ್ತಿಯನ್ನು ಪ್ರಶ್ನಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪವಿಲ್ಲದಿರುವ ವಿಷಯದ ಕುರಿತು ಕಳವಳ ವ್ಯಕ್ತಪಡಿಸುತ್ತಾ, ರಿಜ್ವಾನ್ ಸೋಮವಾರ ರಿಟ್ ಅರ್ಜಿಯನ್ನು ಸಲ್ಲಿಸಿದರು. ಅಲ್ಲದೆ, ಈ ವಿಷಯದಲ್ಲಿ ಎನ್‌ಸಿಸಿಐಎ (NCCIA) ಹೊಂದಿರುವ ವ್ಯಾಪ್ತಿಯ ಅಧಿಕಾರವನ್ನೂ ಅವರು ಪ್ರಶ್ನಿಸಿದ್ದಾರೆ.
ತನ್ನ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪವನ್ನು ಮಾಡಲಾಗಿಲ್ಲ ಎಂದು ರಿಜ್ವಾನ್ ಅವರ ಅರ್ಜಿಯಲ್ಲಿ ವಾದಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ತಮ್ಮ ಅರ್ಜಿಯ ಕುರಿತು ನ್ಯಾಯಾಲಯವು ನಿರ್ಧಾರವನ್ನು ಪ್ರಕಟಿಸುವವರೆಗೆ ವಿಚಾರಣಾ ಪ್ರಕ್ರಿಯೆಯನ್ನು ತಡೆಹಿಡಿಯುವಂತೆಯೂ ಅವರು ಕೋರಿದ್ದಾರೆ.
ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸಕ್ಕೆ ಸಂಬಂಧಿಸಿದ ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಹಾಗೂ ಇತರ ವಿಷಯಗಳ ಕುರಿತು NCCIA ತನಿಖೆ ನಡೆಸುತ್ತಿದೆ ಎಂದು ವರದಿಗಳು ಸೂಚಿಸಿವೆ. ಆದಾಗ್ಯೂ, ಆ ತನಿಖೆಗೂ ಮತ್ತು PCBಯ ಪ್ರತ್ಯೇಕ ಶಿಸ್ತು ಕ್ರಮದ ತನಿಖೆಗೂ ನಡುವಿನ ನಿಖರವಾದ ಸಂಬಂಧವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಂದೂ ಎಸೆತ ಕಾಣದೆಯೇ ಚೀನಾದ ಏಷ್ಯನ್ ಗೇಮ್ಸ್ ಕ್ರಿಕೆಟ್ ಅಭಿಯಾನ ಅಂತ್ಯ
ಸಾಮಾನ್ಯವಾಗಿ ಕ್ರಿಕೆಟಿಗರ ವಿಚಾರದಲ್ಲಿ ಫಿಕ್ಸಿಂಗ್, ದೌರ್ಜನ್ಯ ಸೇರಿದಂತೆ ಬೇರೆ ಬೇರೆ ರೀತಿಯ ಹಲವು ಆರೋಪಗಳು ಕಂಡುಬರುತ್ತವೆ. ಆವಾಗೆಲ್ಲಾ ಪೊಲೀಸ್ ತನಿಖೆಗಳೂ ನಡೆಯುತ್ತವೆ. ಆದರೆ ತನ್ನದೇ ರಾಷ್ಟ್ರೀಯ ತಂಡದ ಆಟಗಾರರ ವಿರುದ್ಧ ಕ್ರಿಕೆಟ್ ಮಂಡಳಿಯೊಂದು ಸೈಬರ್ ಏಜೆನ್ಸಿಗೆ ದೂರು ನೀಡಿದ್ದು ಇದೇ ಮೊದಲು.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವು ಒಂದು ಇನ್ನಿಂಗ್ಸ್ ಮತ್ತು 103 ರನ್‌ಗಳ ಅಂತರದಿಂದ ಸೋಲನುಭವಿಸಿತು; ನಂತರ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 194 ರನ್‌ಗಳ ಸೋಲನ್ನು ಕಂಡಿತು. ಸರಣಿಯಲ್ಲಿ ತಂಡವು 0-2 ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾಗ, ಮೂರನೇ ಟೆಸ್ಟ್‌ಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮಹತ್ವದ ಬದಲಾವಣೆಗಳನ್ನು ಮಾಡಿತು; ಇದರ ಭಾಗವಾಗಿ ರಿಜ್ವಾನ್ ಮತ್ತು ಇಮಾಮ್ ಸೇರಿದಂತೆ ಏಳು ಆಟಗಾರರನ್ನು ತವರಿಗೆ ಕಳುಹಿಸಲಾಯಿತು ಮತ್ತು ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಅವರನ್ನು ಬದಲಾಯಿಸಲಾಯಿತು.