ನವದೆಹಲಿ, ಡಿ.9: 2025–26ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಪಂದ್ಯದಲ್ಲಿ ಹರಿಯಾಣ ವಿರುದ್ಧ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಭಾರತದ ವೇಗಿ ಮೊಹಮ್ಮದ್ ಶಮಿ(Mohammed Shami) ಆಯ್ಕೆದಾರರಿಗೆ ಬಲವಾದ ಸಂದೇಶವನ್ನು ರವಾನಿಸಿದರು. ಬಲಗೈ ವೇಗಿ ನಾಲ್ಕು ಓವರ್‌ಗಳಲ್ಲಿ 30ರನ್‌ಗೆ 4 ವಿಕೆಟ್ ಉಡಾಯಿಸಿದರು.
ಇದು ಶಮಿ ಟೂರ್ನಮೆಂಟ್‌ನಲ್ಲಿ ಸತತ ಮೂರನೇ ಬಾರಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆಯಾಗಿದೆ. ಈ ಹಿಂದೆ ಸರ್ವಿಸಸ್ ವಿರುದ್ಧ 4/13 ಮತ್ತು ಪುದುಚೇರಿ ವಿರುದ್ಧ 3/24 ವಿಕೆಟ್‌ಗಳನ್ನು ಪಡೆದಿದ್ದರು. ಅವರ ಸ್ಥಿರ ಪ್ರದರ್ಶನದ ನಂತರ, ಶಮಿ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಆದಾಗ್ಯೂ, ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಬಂಗಾಳ ತಂಡ ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಸೋಲನ್ನು ದಾಖಲಿಸಿತು.
ಅವರು ಏಳು ಇನ್ನಿಂಗ್ಸ್‌ಗಳಿಂದ 14.93 ಸರಾಸರಿ ಮತ್ತು 8.90 ಎಕಾನಮಿ ರೇಟ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಮಿ ಕೊನೆಯ ಬಾರಿಗೆ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪರ ಆಡಿದ್ದರು. 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 209 ರನ್‌ಗಳಿಂದ ಸೋತಾಗ ಶಮಿ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಅವರ ಪ್ರಸ್ತುತ ಪರಿಸ್ಥಿತಿ ಗೊಂದಲಮಯವಾಗಿದೆ.
IND vs SA: ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ ಬಿಸಿಸಿಐ ವಿರುದ್ಧ ಮನೋಜ್ ತಿವಾರಿ ಕಿಡಿ!
ಫಿಟ್ನೆಸ್ ಸಮಸ್ಯೆಯಿಂದಾಗಿ ಬಂಗಾಳದ ವೇಗದ ಬೌಲರ್ ಅವರನ್ನು ಭಾರತದ ಇಂಗ್ಲೆಂಡ್ ಪ್ರವಾಸದಿಂದ ಹೊರಗಿಡಲಾಗಿದೆ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಈ ಹಿಂದೆ ಹೇಳಿದ್ದರು. ಆದರೆ ದೇಶಿಯ ಟೂರ್ನಿಯಲ್ಲಿ ಇದೀಗ ಗಮನಾರ್ಹ ಪ್ರದರ್ಶನ ತೋರುತ್ತಿದ್ದರು ಶಮಿಯನ್ನು ಕಡೆಗಣಿಸುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ.
ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ ದುಲೀಪ್ ಟ್ರೋಫಿ ಪಂದ್ಯಕ್ಕೆ ಮರಳಿದಾಗಿನಿಂದ ಶಮಿ ಬಂಗಾಳ ಪರ ನಿಯಮಿತವಾಗಿ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ನಾಲ್ಕು ರಣಜಿ ಟ್ರೋಫಿ ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿ, ದೇಶೀಯ ಮಟ್ಟದಲ್ಲಿ ಅತಿ ಉದ್ದದ ಸ್ವರೂಪದಲ್ಲಿ ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಪ್ರದರ್ಶಿಸಿದರು. ಆಯ್ಕೆದಾರರು ಅಂತಿಮವಾಗಿ ತಮ್ಮ ಸ್ಥಿರ ಪ್ರದರ್ಶನವನ್ನು ಗಮನಿಸುತ್ತಾರೆ ಎಂಬ ಆಶಯದೊಂದಿಗೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಶ್ರಮಿಸುವುದನ್ನು ಮುಂದುವರೆಸಿದ್ದಾರೆ.