ದುಬೈ: ಭಾನುವಾರ ನಡೆದಿದ್ದ ಏಷ್ಯಾ ಕಪ್ ಫೈನಲ್ ಪಂದ್ಯದ ನಂತರದ ಅವ್ಯವಸ್ಥೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ(Mohsin Naqvi) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕ್ಷಮೆಯಾಚಿಸಿದ್ದಾರೆ. ಫೈನಲ್ ಪಂದ್ಯದ ನಂತರ ಪರಿಸ್ಥಿತಿ ಈ ರೀತಿ ಹದಗೆಡಬಾರದಿತ್ತು ಎಂದು ನಖ್ವಿ ಬಿಸಿಸಿಐಗೆ ವಿಷಾದ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 30, ಮಂಗಳವಾರ ನಡೆದ ಎಸಿಸಿ ಸಭೆಯಲ್ಲಿ, ಟ್ರೋಫಿ ವಿವಾದದಲ್ಲಿ ನಖ್ವಿ ಅವರ ನಡವಳಿಕೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಏಷ್ಯಾ ಕಪ್ ಟ್ರೋಫಿ ಪಿಸಿಬಿ ಮುಖ್ಯಸ್ಥರದ್ದಲ್ಲ, ಎಸಿಸಿಗೆ ಸೇರಿದ್ದು ಎಂದು ಒತ್ತಿ ಹೇಳಿದ್ದರು. ಸರಿಯಾದ ಹಸ್ತಾಂತರವಿಲ್ಲದೆ ಟ್ರೋಫಿ ಮತ್ತು ಪದಕಗಳನ್ನು ನಖ್ವಿ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಅವರು ಟೀಕಿಸಿದ್ದರು. ಅಲ್ಲದೆ ಐಸಿಸಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಮೊಹ್ಸಿನ್ ನಖ್ವಿ ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ. ಆದರೆ ಟ್ರೋಫಿ ನೀಡಲು ನಿರಾಕರಿಸಿದ್ದಾರೆ.
ಆರಂಭದಲ್ಲಿ ನಖ್ವಿ ಏಷ್ಯಾಕಪ್ ಟ್ರೋಫಿ ಭಾರತಕ್ಕೆ ವಾಪಸ್ ನೀಡಬೇಕಾದರೆ ಒಂದು ಔಪಚಾರಿಕ ಕಾರ್ಯಕ್ರಮವನ್ನು ಆಯೋಜಿಸಿ. ಈ ಕಾರ್ಯಕ್ರಮದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಸಮೇತವಾಗಿ ಭಾರತ ತಂಡದ ಆಟಗಾರರು ಭಾಗಿಯಾಗಬೇಕು. ಅಲ್ಲಿ ನಾನೇ ಸ್ವತಃ ನನ್ನ ಕೈಯಿಂದ ಟ್ರೋಫಿ ಮತ್ತು ಪದಕಗಳನ್ನು ಹಸ್ತಾಂತರಿಸುವೆ ಎಂಬ ಷರತ್ತನ್ನು ವಿಧಿಸಿದ್ದರು. ಬುಧವಾರ ಬೆಳಗ್ಗೆ ನಖ್ವಿ ಮತ್ತೊಂದು ಹೇಳಿಕೆ ನೀಡಿ, ಬಿಸಿಸಿಐ ಉಪಾಧ್ಯಕ್ಷರಿಗೆ ಟ್ರೋಫಿಯನ್ನು ಹಸ್ತಾಂತರಿಸಲು ಸಿದ್ಧವಿಲ್ಲ, ಭಾರತದ ನಾಯಕ ಸೂರ್ಯ ಕುಮಾರ್ ಯಾದವ್ ಟ್ರೋಫಿಯನ್ನು ಪಡೆಯಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ಭೇಟಿ ನೀಡಬೇಕು ಎಂದು ಹೇಳಿದರು.