ಲಂಡನ್, ಸೆ.18: ಶ್ರೀಲಂಕಾ ವಿರುದ್ಧ ನಡೆದ ಇಂಗ್ಲೆಂಡ್‌ನ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ, ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಅವರು ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.
ಇಂಗ್ಲೆಂಡ್‌ನ ರನ್ ಬೆನ್ನಟ್ಟುವಿಕೆಯ ಐದನೇ ಓವರ್‌ನಲ್ಲಿ, ಇಶಾನ್ ಮಲಿಂಗ ಅವರ ಬೌಲಿಂಗ್‌ನಲ್ಲಿ ಸಿಂಗಲ್ ಪಡೆಯುವ ಮೂಲಕ ಬಟ್ಲರ್ ಈ ಮೈಲಿಗಲ್ಲನ್ನು ತಲುಪಿದರು. 36 ವರ್ಷದ ಬಟ್ಲರ್ 15,000 ಟಿ20 ರನ್‌ಗಳನ್ನು ಪೂರೈಸಿದ ಮೊದಲ ಬ್ಯಾಟರ್ ಕೂಡ ಆದರು. ಇವರು 528 ಪಂದ್ಯಗಳಲ್ಲಿ 35.46ರ ಸರಾಸರಿ ಮತ್ತು 147.46ರ ಸ್ಟ್ರೈಕ್-ರೇಟ್‌ನೊಂದಿಗೆ ಈ ಸಾಧನೆ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ಅವಕಾಶಕ್ಕಾಗಿ ಕಾಯಬೇಕು: ಗೌತಮ್ ಗಂಭೀರ್
ಬಟ್ಲರ್ ಇಂಗ್ಲೆಂಡ್, ಲಂಕಾಷೈರ್, ಮ್ಯಾಂಚೆಸ್ಟರ್ ಒರಿಜಿನಲ್ಸ್, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಸಮರ್‌ಸೆಟ್, ಪಾರ್ಲ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಸಿಡ್ನಿ ಥಂಡರ್, ಕೊಮಿಲ್ಲಾ ವಿಕ್ಟೋರಿಯನ್ಸ್, ಡರ್ಬನ್ ಸೂಪರ್ ಜೈಂಟ್ಸ್, ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳನ್ನು ಪ್ರತಿನಿಧಿಸುತ್ತಾ 15 ಸಾವಿರ ರನ್ ಗಳಿಸಿದ್ದಾರೆ.
ಟಿ20ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ 10 ಆಟಗಾರರು
ಜೋಸ್ ಬಟ್ಲರ್ (ಇಂಗ್ಲೆಂಡ್)- 15,000 ರನ್‌ಗಳು*
ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)- 14,999 ರನ್‌ಗಳು
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)- 14,581 ರನ್‌ಗಳು
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)- 14,562 ರನ್‌ಗಳು
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)-14,284 ರನ್‌ಗಳು
ವಿರಾಟ್ ಕೊಹ್ಲಿ (ಭಾರತ)- 14,218 ರನ್‌ಗಳು
ಜೇಮ್ಸ್ ವಿನ್ಸ್ (ಇಂಗ್ಲೆಂಡ್)-14,187 ರನ್‌ಗಳು
ಶೋಯೆಬ್ ಮಲಿಕ್ (ಪಾಕಿಸ್ತಾನ)- 13,571 ರನ್‌ಗಳು
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)- 13,046 ರನ್‌ಗಳು
ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ)- 12,782 ರನ್‌ಗಳು
ಇಂಗ್ಲೆಂಡ್‌ಗೆ 6 ವಿಕೆಟ್ ಜಯ
ಪಂದ್ಯದ ಬಗ್ಗೆ ಹೇಳುವುದಾದರೆ, ಟಾಸ್ ಗೆದ್ದ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು ಬ್ಯಾಟಿಂಗ್ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ತಂಡ ಆರಂಭಿಕ ಆಟಗಾರ ಪಾಥುಮ್ ನಿಸ್ಸಾಂಕಾ(37) ಮತ್ತು ನಾಯಕ ಚರಿತಾ ಅಸಲಂಕ(31) ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 9 ವಿಕೆಟ್‌ಗೆ 145 ರನ್ ಕಲೆಹಾಕಿತು. ಇಂಗ್ಲೆಂಡ್ ಪರ ಲಿಯಾಮ್ ಡಾಸನ್ ಮೂರು ವಿಕೆಟ್ ಕಿತ್ತರೆ, ಜೇಮಿ ಓವರ್ಟನ್ ಮತ್ತು ಜೋಫ್ರಾ ಆರ್ಚರ್ ತಲಾ ಎರಡು ವಿಕೆಟ್ ಕಿತ್ತರು.
ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಟಾಮ್ ಬ್ಯಾಂಟನ್(52*) ಅಜೇಯ ಅರ್ಧಶತಕದ ನೆರವಿನಿಂದ 12.1 ಓವರ್‌ಗಳಲ್ಲಿ 4 ವಿಕೆಟ್‌ಗೆ 146 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.