ಹೈದರಾಬಾದ್, ಎ.21: ಇಲ್ಲಿನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು(ಮಂಗಳವಾರ, ಎ.21) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಋತುವಿನ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(SRH vs DC) ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಜಯ ಕಂಡಿರುವ ಕಾರಣ ತಮ್ಮ ಗೆಲುವಿನ ಓಟವನ್ನು ಮುಂದುವರಿಸಲು ಉತ್ಸುಕವಾಗಿವೆ. ಏತನ್ಮಧ್ಯೆ, ಅನುಭವಿ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್(KL Rahu) ಅವರಿಗೆ ಈ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ಸುರೇಶ್ ರೈನಾ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ.
ರಾಹುಲ್ ಪಂದ್ಯದಲ್ಲಿ ಕೇವಲ 50 ರನ್ ಬಾರಿಸಿದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಧೋನಿಯನ್ನು ಹಿಂದಿಕ್ಕಲಿದ್ದಾರೆ. ರಾಹುಲ್ ಇದುವರೆಗೆ 141 ಇನ್ನಿಂಗ್ಸ್‌ಗಳಲ್ಲಿ 45.67 ರ ಸರಾಸರಿಯಲ್ಲಿ 5390 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕಗಳು ಮತ್ತು 42 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಧೋನಿ ಇದುವರೆಗೆ 242 ಇನ್ನಿಂಗ್ಸ್‌ಗಳಲ್ಲಿ 38.3 ಸರಾಸರಿ ಮತ್ತು 137.45 ಸ್ಟ್ರೈಕ್ ರೇಟ್‌ನಲ್ಲಿ 5439 ರನ್ ಗಳಿಸಿದ್ದಾರೆ. ಇದರಲ್ಲಿ 24 ಅರ್ಧಶತಕ ಒಳಗೊಂಡಿದೆ. ರಾಹುಲ್ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಇನ್ನೊಂದು ಅರ್ಧಶತಕ ಗಳಿಸುವುದು ಅವರಿಗೆ ದೊಡ್ಡ ವಿಷಯವಲ್ಲ. ಅರ್ಧಶತಕ ಗಳಿಸುವಲ್ಲಿ ರಾಹುಲ್ ಯಶಸ್ವಿಯಾದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರನೇ ಆಟಗಾರನಾಗಲಿದ್ದಾರೆ.
ಪಾಕ್ ಲೀಗ್‌ನಿಂದ ಹಿಂದೆ ಸರಿದ ದಾಸುನ್ ಶನಕಗೆ ಒಂದು ವರ್ಷದ ನಿಷೇಧ
ಏತನ್ಮಧ್ಯೆ, ಕೆಎಲ್ ರಾಹುಲ್‌ಗೆ ರೈನಾ ದಾಖಲೆ ಮುರಿಯಲು 139 ರನ್‌ಗಳ ಅಗತ್ಯವಿದೆ. ರೈನಾ 200 ಇನ್ನಿಂಗ್ಸ್‌ಗಳಲ್ಲಿ 32.51 ಸರಾಸರಿಯಲ್ಲಿ 5528 ರನ್ ಗಳಿಸಿದ್ದಾರೆ. ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು ಈವರೆಗೆ 8908* ರನ್ ಗಳಿಸಿದ್ದಾರೆ. ಆ ಬಳಿಕ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನಗಳಲ್ಲಿ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಇದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್
ವಿರಾಟ್ ಕೊಹ್ಲಿ - 8908 ರನ್
ರೋಹಿತ್ ಶರ್ಮಾ - 7183 ರನ್
ಶಿಖರ್ ಧವನ್ - 6769 ರನ್
ಡೇವಿಡ್ ವಾರ್ನರ್ - 6565 ರನ್
ಸುರೇಶ್ ರೈನಾ - 5528 ರನ್
ಎಂಎಸ್ ಧೋನಿ - 5439 ರನ್
ಕೆಎಲ್ ರಾಹುಲ್ - 5390 ರನ್