ಚೆನ್ನೈ, ಮಾ.23: ಎಂ.ಎಸ್. ಧೋನಿಯವರ ಐಪಿಎಲ್ ನಿವೃತ್ತಿ ಕುರಿತಂತೆ ಆಗಾಗ ಊಹಾಪೋಹಗಳು ಹರಿದಾಡುತ್ತಿರುತ್ತವೆ. 2026ರ ಐಪಿಎಲ್ ಆವೃತ್ತಿ ಅವರ ಕೊನೆಯ ಸೀಸನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಧೋನಿ ತಮ್ಮ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ನೀಡಿದ್ದಾರೆ. ತಾವು 60 ವರ್ಷದ ವರೆಗೂ ಐಪಿಎಲ್ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಧೋನಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ (chennai superkings) ತಂಡ ಭಾನುವಾರ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ "ರೋರ್ 26' ಹೆಸರಿನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತು. ಇದರಲ್ಲಿ ಹಾಲಿ ಆಟಗಾರರೊಂದಿಗೆ ಸಿಎಸ್‌ಕೆ ತಂಡದ ಮಾಜಿ ಆಟಗಾರರೂ ಭಾಗವಹಿಸಿ ಅಭಿಮಾನಿಗಳಿಗೆ ಮುದ ನೀಡಿದರು. ಈ ವೇಳೆ ನಟ ಶಿವಕಾರ್ತಿಕೇಯನ್ ಅವರು ಧೋನಿ ಬಳಿ ನೀವು ಇನ್ನೂ ಹಲವು ವರ್ಷಗಳ ಕಾಲ ಆಡಬೇಕು, 60 ವರ್ಷದ ತನಕ ಆಡಿದರೆ ಖುಷಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಧೋನಿ ನಾನು ಫಿಟ್ ಇದ್ದರೆ ಖಂಡಿತವಾಗಿಯೂ ಆಡುತ್ತೇನೆ ಎಂದು ಮುಗುಳ್ನಕ್ಕರು. ಧೋನಿ ಅವರ ಈ ಮಾತು ಕೇಳಿದ ಪ್ರೇಕ್ಷಕರು ಒಂದು ಕ್ಷಣ ಸಂತಸದಲ್ಲಿ ಜೋರಾಗಿ ಕಿರುಚಿದರು.
ಈ ಕಾರ್ಯಕ್ರಮದಲ್ಲಿ ಸಿಎಸ್‌ಕೆ ತಂಡದ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್, ಮೈಕೆಲ್ ಹಸ್ಸೆ, ಡ್ವೇನ್ ಬ್ರಾವೊ, ಮುತ್ತಯ್ಯ ಮುರಳೀಧರನ್, ಹರ್ಭಜನ್ ಸಿಂಗ್, ಮುರಳಿ ವಿಜಯ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್ ಮತ್ತು ಎಸ್. ಬದರೀನಾಥ್ ಮತ್ತೆ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಂಡರು ಮತ್ತು ಹಾಲಿ ಆಟಗಾರರೊಂದಿಗೆ ಆಡಿ ಸಂಭ್ರಮಿಸಿದರು.
ಐಪಿಎಲ್ 2026ರಲ್ಲಿ ಮ್ಯಾಚ್-ವಿನ್ನರ್ ಆಗಬಹುದಾದ 5 ಆರ್‌ಸಿಬಿ ಆಟಗಾರರು
ಸುರೇಶ್ ರೈನಾ ಮತ್ತು ಮ್ಯಾಥ್ಯೂ ಹೇಡನ್ ಅವರನ್ನು ಸಿಎಸ್‌ಕೆ ತಂಡದ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳಿಸಲಾಯಿತು.ಇದೇ ವೇಳೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಿಎಸ್‌ಕೆ ತಂಡ ಮಾರ್ಚ್ 30ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ಮೂಲಕ ಐಪಿಎಲ್ 19ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲಿದೆ.
19 ನೇ ಐಪಿಎಲ್ ಸೀಸನ್ ಆಡಲಿರುವ ಧೋನಿ, ಲೀಗ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿ ಉಳಿದಿದ್ದಾರೆ. 44 ವರ್ಷದ ಧೋನಿ ಈವರೆಗೆ 278 ಪಂದ್ಯಗಳು ಮತ್ತು 5439 ರನ್‌ಗಳೊಂದಿಗೆ, ಸಿಎಸ್‌ಕೆ ಪ್ರಯಾಣದಲ್ಲಿ ಕೇಂದ್ರಬಿಂದುವಾಗಿದ್ದಾರೆ. 2024 ರ ಸೀಸನ್‌ಗೆ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯುವ ಮೊದಲು ಫ್ರಾಂಚೈಸಿಯನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು.