ರಾಂಚಿ, ಮಾ.4: ಐಪಿಎಲ್ ಆಡಲು ಚೆನ್ನೈಯಲ್ಲಿ ಅಭ್ಯಾಸ ನಿರತರಾಗಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣ 1000 ರೂ. ದಂಡ ವಿಧಿಸಲಾಗಿದೆ. ಧೋನಿ ತಮ್ಮ ರಾಂಚಿಯಲ್ಲಿರುವ ತಮ್ಮ ನಿವಾಸದ ಬಳಿ ಅತಿ ವೇಗದ ಚಾಲನೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರು. ಹೀಗಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 183 ರ ಅಡಿಯಲ್ಲಿ ಅವರಿಗೆ ಇ-ಚಲನ್ ನೀಡಲಾಗಿದೆ.
ರಾಂಚಿಯಲ್ಲಿ ವಸತಿ ನಿವೇಶನವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ವಸತಿ ಮಂಡಳಿ ಧೋನಿಗೆ ನೋಟಿಸ್ ಜಾರಿ ಮಾಡಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ವಸತಿ ಉದ್ದೇಶಗಳಿಗಾಗಿ ಮಾತ್ರ ಹಂಚಿಕೆ ಮಾಡಲಾದ ಆಸ್ತಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿರಬಹುದು ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಿವೇಶನವು ರಾಂಚಿಯ ಹರ್ಮು ರಸ್ತೆಯಲ್ಲಿದ್ದು, ಧೋನಿ ಈ ಹಿಂದೆ ರಿಂಗ್ ರಸ್ತೆಯಲ್ಲಿರುವ ತಮ್ಮ ಪ್ರಸ್ತುತ ನಿವಾಸಕ್ಕೆ ಸ್ಥಳಾಂತರಗೊಳ್ಳುವ ಮೊದಲು ಅಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಪಿಎಲ್ 2026ಕ್ಕೆ ಸಜ್ಜಾಗುತ್ತಿರುವ ಧೋನಿ
ಸದ್ಯ ಧೋನಿ ಮುಂಬರುವ ಐಪಿಎಲ್ ಟೂರ್ನಿಗೆ ಸಿದ್ಧತೆ ನೆಡೆಸುತ್ತಿದ್ದಾರೆ. ಈಗಾಗಲೇ ತಂಡದ ಕೆಲ ಸಹ ಆಟಗಾರರೊಂದಿಗೆ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಸೆಷನ್‌ಗಳಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು ವೈರಲ್ ಆಗುತ್ತಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ 2025 ರ ಕಠಿಣ ಅಭಿಯಾನದ ನಂತರ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ 14 ಪಂದ್ಯಗಳಲ್ಲಿ 10 ಸೋಲುಗಳೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು.
ಧೋನಿಯನ್ನು ಅನ್‌ಕ್ಯಾಪ್ಡ್ ಪ್ಲೇಯರ್ ನಿಯಮದಡಿಯಲ್ಲಿ 4 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ಅವರು ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಮಾಡುವ ಸಾಧ್ಯತೆ ಅಧಿಕವಾಗಿದೆ. ಸಂಜು ಸ್ಯಾಮ್ಸನ್ ಕೀಪಿಂಗ್ ಹೊಣೆ ನಿಭಾಯಿಸಬಹುದು. ಕಳೆದ ಋತುವಿನಲ್ಲಿ, ಧೋನಿ 14 ಪಂದ್ಯಗಳಲ್ಲಿ 135.17 ಸ್ಟ್ರೈಕ್ ರೇಟ್‌ನಲ್ಲಿ 196 ರನ್ ಗಳಿಸಿದರು.