ಮುಂಬಯಿ, ಮಾ.24: ಚೆನ್ನೈ ಸೂಪರ್ ಕಿಂಗ್ಸ್(CSK)ನಲ್ಲಿ ಎಂಎಸ್ ಧೋನಿ(MS Dhoni) ಪಾತ್ರದ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ(Aakash Chopra) ಬಲವಾದ ಹೇಳಿಕೆ ನೀಡಿದ್ದು, ಐಪಿಎಲ್ 2026ರಲ್ಲಿಯೂ ಧೋನಿ ನಾಯಕನಾಗಿರಬೇಕು ಎಂದು ಹೇಳಿದ್ದಾರೆ. ಧೋನಿ ಪಾತ್ರದ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿರುವಂತೆಯೇ, ಚೋಪ್ರಾ ಅವರ ಹೇಳಿಕೆ ಚರ್ಚೆಗೆ ಹೊಸ ಬಲ ತುಂಬಿದೆ.
ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಚೋಪ್ರಾ, ಧೋನಿ ಆಡುವ XI ನ ಭಾಗವಾಗಿದ್ದರೆ ತಂಡವನ್ನು ಮುನ್ನಡೆಸಬೇಕೆಂದು ಹೇಳಿದರು. "ನೋಡಿ, ಧೋನಿ ಆಡುತ್ತಿದ್ದರೆ, ಅವರೇ ನಾಯಕನಾಗಿರಬೇಕು. ಅವರು 20 ಓವರ್‌ಗಳ ಕಾಲ ತಂಡದಲ್ಲಿದ್ದು, ಕೀಪಿಂಗ್ ಮಾಡಿದರೆ, ಅವರು ಇಡೀ ಪಂದ್ಯಕ್ಕಾಗಿ ಮೈದಾನದಲ್ಲಿ ಇರುತ್ತಾರೆ ಎಂಬುದು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ಸಿಎಸ್‌ಕೆ ಧೋನಿಯಿಂದ ಉತ್ತಮವಾದದ್ದನ್ನು ಪಡೆಯಲು ಬಯಸಿದರೆ, ಅವರೇ ನಾಯಕನಾಗಿರಬೇಕು" ಎಂದರು. 2024 ರ ಋತುವಿಗೆ ಮುಂಚಿತವಾಗಿ ಧೋನಿ ನಾಯಕತ್ವದಿಂದ ಕೆಳಗಿಳಿದ ನಂತರ ರುತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಐಪಿಎಲ್‌ನಲ್ಲಿ ಧೋನಿ 278 ಪಂದ್ಯಗಳನ್ನು ಆಡಿದ್ದು, 5439 ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ, 2024 ರ ಋತುವಿಗೆ ಮುಂಚಿತವಾಗಿ ನಾಯಕತ್ವ ತ್ಯಜಿಸುವ ಮೊದಲು ಫ್ರಾಂಚೈಸಿಯನ್ನು ಐದು ಬಾರಿ ಚಾಂಪಿಯನ್ ಮಾಡಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಋತುರಾಜ್ ಗಾಯಕ್ವಾಡ್ ಹೊರಗುಳಿದ ಕಾರಣ ಧೋನಿ ನಾಯಕತ್ವವಹಿಸಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ.
ಈ ಬಾರಿಯ ಐಪಿಎಲ್ ಋತುವಿನಲ್ಲಿ ಧೋನಿ ಭಾಗವಹಿಸುವಿಕೆಯ ಬಗ್ಗೆ ಸಂದೇಹಗಳಿದ್ದವು. ಆದರೆ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಬಲವಾದ ಹೇಳಿಕೆಯೊಂದಿಗೆ ಎಲ್ಲಾ ಅನುಮಾನಗಳನ್ನು ತೆರವುಗೊಳಿಸಿದರು. ಧೋನಿ ಎಲ್ಲಾ ಪಂದ್ಯಗಳನ್ನು ಆಡುತ್ತಾರೆ, ಆದರೆ ಅವರ ಪಾತ್ರವನ್ನು ತಂಡದ ಆಡಳಿತ ಮಂಡಳಿ ನಿರ್ಧರಿಸುತ್ತದೆ ಎಂದು ಸಿಎಸ್‌ಕೆ ಮುಖ್ಯಸ್ಥರು ಹೇಳಿದರು.
IPL 2026: ಏಕೈಕ ಆವೃತ್ತಿಯಲ್ಲಿ 800ಕ್ಕೂ ಅಧಿಕ ರನ್ ಗಳಿಸಿದ ನಾಲ್ವರು ಬ್ಯಾಟರ್ಸ್!
ಸಿಎಸ್‌ಕೆ ತಂಡವು ತನ್ನ ಐಪಿಎಲ್ 2026 ರ ಋತುವನ್ನು ಉದ್ಘಾಟನಾ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ ಪ್ರಾರಂಭಿಸುತ್ತದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ.