ಗುವಾಹಟಿ, ನ.21: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿರುವ ಭಾರತ ತಂಡ ಗುವಾಹಟಿ ಟೆಸ್ಟ್(Guwahati Test) ಪಂದ್ಯದ ಸವಾಲಿಗೆ ಸಜ್ಜಾಗಿದೆ. ಎರಡನೇ ಹಾಗೂ ಅಂತಿಮ ಪಂದ್ಯ ಶನಿವಾರದಿಂದ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಸರಣಿ ಸೋಲಿನಿಂದ ಪಾರಾಗಲು ಇದು ಟೀಮ್ ಇಂಡಿಯಾ ಪಾಲಿಗೆ ಮಸ್ಟ್ ವಿನ್ ಪಂದ್ಯವಾಗಿದೆ. ಇಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಟೆಸ್ಟ್ ಪಂದ್ಯ ಇದಾದ ಕಾರಣ ಪಿಚ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಇತಿಹಾಸ ನಿರ್ಮಿಸಲು ಬವುಮಾ ಕಾತರ
15 ವರ್ಷಗಳ ನಂತರ ಭಾರತದಲ್ಲಿ ಪಂದ್ಯ ಗೆದ್ದ ಜೋಶ್‌ನಲ್ಲಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಇದೀಗ ಭಾರತದ ನೆಲದಲ್ಲಿ 25 ವರ್ಷಗಳ ನಂತರ ಸರಣಿ ಗೆಲುವಿನ ದಾಖಲೆ ಬರೆಯಲು ತುದಿಗಾಲಿನಲ್ಲಿ ನಿಂತಿದೆ. ಅತ್ತ ಭಾರತ ತಂಡ ತವರಿನಲ್ಲಿ ಸರಣಿ ಸೋಲು ತಪ್ಪಿಸಲು ಶಕ್ತಿ ಮೀರಿದ ಪ್ರದರ್ಶನದ ಮೂಲಕ ಗೆಲ್ಲುವ ಪಣ ತೊಟ್ಟಿದೆ. ಆದರೆ ಅದೃಷ್ಟವೂ ಕೈಹಿಡಿಯಬೇಕು. ಹೌದು, ಸೋಲಿಲ್ಲದ ನಾಯಕ ತೆಂಬಾ ಬವುಮಾ ಮುಂದೆ ಪಂದ್ಯ ಗೆಲ್ಲವುದು ಅಷ್ಟು ಸುಲಭದ ಮಾತಲ್ಲ. ಡ್ರಾ ಆದರೂ ಪ್ರವಾಸಿ ತಂಡದ ಮುಡಿಗೆ ಸರಣಿ ಕಿರೀಟ ಒಲಿಯಲಿದೆ. ಹೀಗಾಗಿ ಪಂತ್ ಪಡೆ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕು. 2010ರಲ್ಲಿ ಭಾರತದ ನೆಲದಲ್ಲಿ ಹರಿಣ ಪಡೆ ಟೆಸ್ಟ್ ಸರಣಿಯನ್ನು 2–0ಯಿಂದ ಜಯಿಸಿತ್ತು.
ಇನ್ನೊಂದೆಡೆ ದೇಶದ ಇತರ ನಗರಗಳಿಗಿಂತ ಈಶಾನ್ಯ ಭಾಗದ ಗುವಾಹಟಿಯಲ್ಲಿ ಸುರ್ಯೋದಯ ಮತ್ತು ಸೂರ್ಯಾಸ್ತ ಬೇಗನೇ ಸಂಭವಿಸಲಿರುವ ಹಿನ್ನೆಲೆಯಲ್ಲಿ ಆಟಗಾರರು ದಿನಚರಿಯಲ್ಲಿ ಬದಲಾವಣೆ ಮಾಡಬೇಕಾದ ಸವಾಲು ಕೂಡ ಇದೆ. ಬೆಳಿಗ್ಗೆ 8.30ಕ್ಕೆ ಟಾಸ್ ಆಗಲಿದ್ದು 9ಗಂಟೆಗೆ ಆಟ ಆರಂಭವಾಗಿ ಸಂಜೆ 4ರವರೆಗೆ ನಡೆಯಲಿದೆ.
ಪಂತ್ ನಾಯಕ
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಕತ್ತುನೋವಿಗೆ ಸಿಲುಕಿದ್ದ ನಾಯಕ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ. ಇದನ್ನು ಶುಕ್ರವಾರ ಬಿಸಿಸಿಐ ಖಚಿತಪಡಿಸಿತು. ಪಂತ್ ಟಾಸ್‌ಗೆ ಆಗಮಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ ಭಾರತವನ್ನು ಮುನ್ನಡೆಸಿದ 38ನೇ ನಾಯಕರೆನಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಅಥವಾ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ.
ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿಯೂ ವಿಫಲರಾಗಿದ್ದರು. ಅವರು ಮತ್ತೆ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಬ್ಯಾಕ್ ಅಪ್ ಕೀಪರ್ ಆಗಿದ್ದರೂ ತಂಡದಲ್ಲಿ ಅವಕಾಶ ಪಡೆದ ಜುರೇಲ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ವೇಗದ ಪಿಚ್ ಆಗಿದ್ದರೆ ನಾಲ್ವರು ಸ್ಪಿನ್ನರ್‌ಗಳ ಪೈಕಿ ಇಬ್ಬರನ್ನು ಕೈಬಿಟ್ಟು ವೇಗಿ ಆಕಾಶ್‌ದೀಪ್ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು. ಆಗ ಅಕ್ಷರ್ ಪಟೇಲ್ ಮತ್ತು ಕುಲ್‌ದೀಪ್ ಜಾಗ ಬಿಡಬೇಕಾದೀತು.
ಇದನ್ನೂ ಓದಿIND vs SA: ಊಟದ ಹೊತ್ತಿಗೆ ಚಹಾ!; ಗುವಾಹಟಿ ಟೆಸ್ಟ್ ಸಮಯದಲ್ಲಿ ಬದಲಾವಣೆ
ಪಕ್ಕೆಲುಬಿನ ಗಾಯದಿಂದಾಗಿ ವೇಗಿ ಕಗಿಸೊ ರಬಾಡ ಅವರು ಈ ಸರಣಿಯಿಂದಲೇ ಹೊರಬಿದ್ದಿದಾರೆ. ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲು ಲುಂಗಿ ಎನ್‌ಗಿಡಿ ತಂಡ ಸೇರಿದು ಆಡುವ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನ.
ಬೌನ್ಸಿ ಪಿಚ್?
ಮೂಲಗಳ ಪ್ರಕಾರ ಗುವಾಹಟಿಯ ಪಿಚ್ ಕೆಂಪು ಜೇಡಿಮಣ್ಣಿನಿಂದ ತಯಾರಿಸಲಾಗಿದ್ದು, ವೇಗ ಮತ್ತು ಬೌನ್ಸ್‌ನಿಂದ ಕೂಡರಲಿದೆ ಎನ್ನಲಾಗಿದೆ. ಆದರೆ ಈಡನ್ ಗಾರ್ಡನ್ಸ್‌ನಲ್ಲಿ ಬ್ಯಾಟರ್‌ಗಳನ್ನು ಕಾಡಿದ ಅನಿರೀಕ್ಷಿತ ಬೌನ್ಸ್ ಸಾಧ್ಯತೆ ಇಲ್ಲ. ಸ್ಪಿನ್ನರ್‌ಗಳು ಹಿಡಿತ ಸಾಧಿಸಲು ಅಂತಿಮ ಎರಡು ದಿನಗಳ ವರೆಗೂ ಕಾಯಬೇಕಾಗಬಹುದು. ಒಂದು ವೇಳೆ ಸಂಪೂರ್ಣ ವೇಗ ಮತ್ತು ಬೌನ್ಸಿ ಪಿಚ್ ಸಿದ್ಧಪಡಿಸಿದ್ದೇ ಆದಲ್ಲಿ ಅದು ದಕ್ಷಿಣ ಆಫ್ರಿಕಾಗೆ ಹೆಚ್ಚು ನೆರವಾಗಬಹುದು. ಏಕೆಂದರೆ ತವರಿನಲ್ಲಿ ವೇಗದ ಪಿಚ್‌ಗಳಲ್ಲಿ ಆಡಿ ಪಳಗಿರವ ಪಡೆಯನ್ನೇ ದಕ್ಷಿಣ ಆಫ್ರಿಕಾ ಹೊಂದಿದೆ.
ಸಂಭಾವ್ಯ ತಂಡಗಳು
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ರಿಷಭ್ ಪಂತ್ (ನಾಯಕ, ವಿ.ಕೀ.) ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ನಿತೀಶ್ ರಾಣಾ, ಜಸ್ಪ್ರೀತ್ ಬುಮ್ರಾ, ಆಕಾಶ್‌ದೀಪ್, ಮೊಹಮ್ಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೋನಿ ಡಿ ಜೊರ್ಜಿ, ಟೆಂಬಾ ಬವುಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿ.ಕೀ.), ಕೇಶವ್ ಮಹಾರಾಜ್, ಸೈಮನ್ ಹಾರ್ಮರ್, ಮಾರ್ಕೊ ಜಾನ್ಸೆನ್.
ಪಂದ್ಯ ಆರಂಭ; ಬೆಳಗ್ಗೆ 9.00
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್