ಕಾಬೂಲ್, ಆ.25: ಭಾರತ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟಗೊಂಡಿದ್ದು ಇಬ್ರಾಹಿಂ ಜದ್ರಾನ್ ಅವರು ಟಿ20 ತಂಡದ ಪೂರ್ಣಾ ವಧಿ ನಾಯಕನಾಗಿ ನೇಮಕಗೊಂಡಿದ್ದಾರೆ. 15 ಸದಸ್ಯರ ತಂಡದಲ್ಲಿ ವೇಗಿ ನವೀನ್-ಉಲ್-ಹಕ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮುಂದಿನ ತಿಂಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮೂರು ಟಿ20ಐಗಳಲ್ಲಿ ಭಾರತವನ್ನು ಎದುರಿಸಲಿದೆ.
48 ಟಿ20ಐಗಳಲ್ಲಿ 67 ವಿಕೆಟ್‌ಗಳನ್ನು ಕಬಳಿಸಿರುವ 26 ವರ್ಷದ ವೇಗಿ, ಡಿಸೆಂಬರ್ 2024 ರಲ್ಲಿ ಕೊನೆಯ ಬಾರಿಗೆ 20 ಓವರ್‌ಗಳ ಸ್ವರೂಪದಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು. ರಶೀದ್ ಖಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್‌ಜೈ, ರಹಮಾನುಲ್ಲಾ ಗುರ್ಬಾಜ್, ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್ ಮುಂತಾದವರು ತಂಡದಲ್ಲಿದ್ದಾರೆ. ಸ್ಪಿನ್ನರ್ ಅಲ್ಲಾ ಗಜನ್‌ಫರ್‌ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಅಫ್ಘಾನಿಸ್ತಾನ ಕೊನೆಯ ಬಾರಿಗೆ ಫೆಬ್ರವರಿ 19, 2026 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ಸಮಯದಲ್ಲಿ ಟಿ20ಐ ಪಂದ್ಯವನ್ನು ಆಡಿತ್ತು. ರಶೀದ್ ಖಾನ್ ಆ ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದರು, ಆದರೆ ಅಫ್ಘಾನಿಸ್ತಾನ ಸೂಪರ್ 8 ಗೆ ಅರ್ಹತೆ ಪಡೆಯಲು ವಿಫಲವಾದ ನಂತರ, ಅವರು ಟಿ20ಐ ನಾಯಕತ್ವದಿಂದ ಕೆಳಗಿಳಿದರು.
ಈ ಸರಣಿಯು ಸೆಪ್ಟೆಂಬರ್ 13ರಿಂದ 17ರವರೆಗೆ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಅಫ್ಘಾನಿಸ್ತಾನ ತಂಡಕ್ಕೆ ‘ತವರು ಸರಣಿ’ಯಾಗಿದೆ. ಸೆ.13ರಂದು ಮೊದಲ ಪಂದ್ಯ, ಸೆ.15ರಂದು ಎರಡನೇ ಪಂದ್ಯ ಮತ್ತು ಸೆ.17ರಂದು ಕೊನೆಯ ಪಂದ್ಯ ನಡೆಯಲಿದೆ.
ಅಫ್ಘಾನಿಸ್ತಾನ ಇದುವರೆಗೆ ಭಾರತವನ್ನು ಟಿ20ಐನಲ್ಲಿ ಸೋಲಿಸಿಲ್ಲ. ಇಲ್ಲಿಯವರೆಗೆ ಉಭಯ ತಂಡಗಳ ನಡುವೆ ನಡೆದ ಒಂಬತ್ತು ಪಂದ್ಯಗಳಲ್ಲಿ, ಭಾರತ ಏಳು ಸಂಪೂರ್ಣ ಗೆಲುವುಗಳನ್ನು ಗಳಿಸಿದೆ, ಆದರೆ ಒಂದು ಪಂದ್ಯವನ್ನು ಡಬಲ್ ಸೂಪರ್ ಓವರ್ ನಂತರ ನಿರ್ಧರಿಸಲಾಯಿತು. ಹ್ಯಾಂಗ್‌ಝೌನಲ್ಲಿ ನಡೆದ 2023 ರ ಏಷ್ಯನ್ ಗೇಮ್ಸ್‌ನಲ್ಲಿ ನಡೆಯಬೇಕಿದ್ದ ಇನ್ನೊಂದು ಪಂದ್ಯವು ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿತ್ತು.
ಅಫ್ಘಾನಿಸ್ತಾನ ತಂಡ
ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನೂರ್ ರಹಮಾನ್ (ವಿಕೆಟ್ ಕೀಪರ್), ಸಾದಿಕ್‌ಉಲ್ಲಾ ಅಟಲ್, ದರ್ವಿಶ್ ರಸೂಲಿ, ಅಜ್ಮತ್‌ಉಲ್ಲಾ ಒಮರ್‌ಝೈ, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹ್ಮದ್, ಮುಜೀಬ್ ಉರ್ ರಹಮಾನ್, ಫಜಲ್ ಹಕ್ ಫಾರೂಕಿ, ಅಬ್ದುಲ್ಲಾ ಅಹ್ಮದ್‌ಜೈ, ನವೀನ್ ಉಲ್ ಹಕ್.