ನವದೆಹಲಿ: ಕಳೆದ ವಾರ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಜಾವೆಲಿನ್ ತಾರೆ ಇದೀಗ ಒಸ್ಟ್ರಾವಾ ಗೋಲ್ಡನ್ ಸ್ಪೈಕ್‌ನಲ್ಲಿ ಸ್ಫರ್ಧಿಸಲು ಸಜ್ಜಾಗಿದ್ದಾರೆ. ಮಂಗಳವಾರ ತಡರಾತ್ರಿ ನಡೆಯುವ ಈ ಕೂಟದಲ್ಲಿ ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಪ್ರಸಕ್ತ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಚೋಪ್ರಾ ದೋಹಾದಲ್ಲಿ ನಡೆದ ಡೈಮಂಡ್ ಲೀಗ್ ಕೂಟದಲ್ಲಿ 90 ಮೀಟರ್ ಗಡಿಯನ್ನು ದಾಟಿ ಇತಿಹಾಸ ನಿರ್ಮಿಸಿದ್ದರು.
ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದ ಎರಡು ಆವೃತ್ತಿಗಳಿಂದ ಹೊರಗುಳಿದಿದ್ದ ನೀರಜ್ ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದಾರೆ. ಕಳೆದ ವರ್ಷ ಸ್ನಾಯುಸೆಳೆತದಿಂದಾಗಿ ಸ್ಪರ್ಧೆಯಿಂದ ಹೊರಗುಳಿದ ನಂತರ ಅತಿಥಿಯಾಗಿ ಅವರು ಭಾಗವಹಿಸಿದ್ದರು.
ನೀರಜ್ ಅವರ ಹಾಲಿ ಕೋಚ್ 59 ವರ್ಷ ವಯಸ್ಸಿನ ಯಾನ್ ಝೆಲೆಜ್ನಿ ಅವರು 1986ರಿಂದ 2006ರ ನಡುವೆ ಇಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಹುತೇಕ ಸಂದರ್ಭದಲ್ಲಿ 90 ಮೀಟರ್‌ಗಿಂತ ಹೆಚ್ಚು ದೂರ ಭರ್ಜಿ ಎಸೆದು ಚಿನ್ನ ಗೆದ್ದಿದ್ದರು. ಕೂಟದ ದಾಖಲೆ ಕೂಡ ಝೆಲೆಜ್ನಿ(94.64 ಮೀ.) ಹೆಸರಿನಲ್ಲಿದೆ. ಇದೀಗ ಶಿಷ್ಯನಾಗಿ ನೀರಜ್ ಪ್ರಶಸ್ತಿ ಗೆಲ್ಲುವ ಜತೆಗೆ ಗುರುವಿನ ದಾಖಲೆ ಹಿಂದಿಕ್ಕಲಿದ್ದಾರಾ ಎಂದು ಕಾದು ನೋಡಬೇಕಿದೆ.
ಜರ್ಮನಿಯ ಜೂಲಿಯನ್ ವೆಬರ್ ಅವರ ಅನುಪಸ್ಥಿತಿಯಲ್ಲಿ ಚೋಪ್ರಾ ಪ್ರಶಸ್ತಿಗೆ ಫೇವರಿಟ್ ಎನಿಸಿದ್ದರೂ ರಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಚಿನ್ನದ ಪದಕ ವಿಜೇತ ಥಾಮಸ್ ರೋಹ್ಲರ್ ಅವರ ಸವಾಲು ಎದುರಿಸಬೇಕಿದೆ.
"ಮಹಾನ್ ಕ್ರೀಡಾಪಟು ಮತ್ತು ತರಬೇತುದಾರರೊಂದಿಗೆ ಕೆಲಸ ಮಾಡಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ತಂತ್ರದಲ್ಲಿ ಸ್ವಲ್ಪ ಹೆಚ್ಚಿನ ಸುಧಾರಣೆಯ ನಂತರ ನಾನು ಈ ವರ್ಷ ಈಗಾಗಲೇ 90 ಮೀ ಎಸೆದಿದ್ದೇನೆ. ಆದ್ದರಿಂದ, ಒಸ್ಟ್ರಾವಾದಲ್ಲಿ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ" ಎಂದು ನೀರಜ್ ಹೇಳಿದರು.
ನಾನು ಚಿಕ್ಕವನಿದ್ದಾಗ, ಉಸೇನ್ ಬೋಲ್ಟ್ ಇಲ್ಲಿ ಸ್ಪರ್ಧಿಸುತ್ತಿರುವ ಕ್ರೀಡಾಪಟುಗಳ ಬಹಳಷ್ಟು ವಿಡಿಯೊಗಳು ಮತ್ತು ಫೋಟೋಗಳನ್ನು ನೋಡಿದ್ದೆ. ನಾನು ಕಳೆದ ವರ್ಷ ಇಲ್ಲಿಗೆ ಬಂದಿದ್ದೆ ಆದರೆ ಗಾಯದ ಕಾರಣ ನಾನು ಸ್ಪರ್ಧಿಸಲಿಲ್ಲ ಎಂದು ಚೋಪ್ರಾ ಹೇಳಿದರು. ಇದೇ ವೇಳೆ ಟೋಕಿಯೊದಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್ ನನ್ನ ಪ್ರಮುಖ ಗುರಿ ಎಂದರು. ವಿಶ್ವ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 13 ರಿಂದ 21 ರವರೆಗೆ ಟೋಕಿಯೊದಲ್ಲಿ ನಡೆಯಲಿವೆ.