ದುಬೈ: ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಸುತ್ತಿನಲ್ಲಿ ಅಗ್ರ ಮೂರು ಸ್ಥಾನಗಳನ್ನು ಖಚಿತಪಡಿಸಿಕೊಂಡ ನೇಪಾಳ(Nepal) ಮತ್ತು ಒಮಾನ್(Oman) ತಂಡಗಳು ಸೂಪರ್ ಸಿಕ್ಸ್ ಪಂದ್ಯಕ್ಕೂ ಮೊದಲೇ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ(T20 World Cup 2026) ಅರ್ಹತೆ ಪಡೆದುಕೊಂಡಿದೆ. ಟಿ20 ವಿಶ್ವಕಪ್ ಪಂದ್ಯಾವಳಿ ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.
ಸೂಪರ್ ಸಿಕ್ಸ್ ಹಂತದ ಮೊದಲ ಆರು ಪಂದ್ಯಗಳಲ್ಲಿ ಐದು ಪಂದ್ಯಗಳ ಫಲಿತಾಂಶ ಕೊನೆಯ ಓವರ್‌ವರೆಗೆ ಹೋಯಿತು. ಆದರೂ, ನೇಪಾಳ ಎರಡು ಪ್ರಮುಖ ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿತು. ಓಮನ್ ಕೂಡ ಕತಾರ್ ವಿರುದ್ಧ ಜಯ ಸಾಧಿಸುವ ಮೂಲಕ ವಿಶ್ವಕಪ್‌ಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿತು.
ಈ ವರೆಗೆ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಕೆನಡಾ, ನೆದರ್‌ಲ್ಯಾಂಡ್ಸ್, ಇಟಲಿ, ಜಿಂಬಾಬ್ವೆ, ನಮೀಬಿಯಾ, ನೇಪಾಳ, ಒಮಾನ್ ಅರ್ಹತೆ ಪಡೆದ ದೇಶಗಳಾಗಿದೆ.
ಇನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಮಲೇಷ್ಯಾ, ಕುವೈತ್, ಜಪಾನ್, ಸಮೋವಾ, ಪಪುವಾ ನ್ಯೂಗಿನಿಯಾ ಈ ದೇಶಗಳ ಪೈಕಿ ಒಂದು ತಂಡಕ್ಕೆ ಅರ್ಹತೆ ಪಡೆಯಲು ಅವಕಾಶವಿದೆ. ಕ್ವಾಲಿಫೈಯರ್ ಪಂದ್ಯಗಳನ್ನಾಡಿ ಅರ್ಹತೆ ಪಡೆಯಬೇಕಿದೆ. ಒಮಾನ್ ತಂಡ ಏಷ್ಯಾಕಪ್‌ನಲ್ಲಿ ಬಲಿಷ್ಠ ತಂಡ ಭಾರತಕ್ಕೂ ತೀವ್ರ ಪೈಪೋಟಿ ನೀಡಿತ್ತು.
ಇದನ್ನೂ ಓದಿ 2026 Men's T20 World Cup: ಫೆ.7 ರಿಂದ ಟಿ20 ವಿಶ್ವಕಪ್ ಆರಂಭ ?
ಮೂಲಗಳ ಪ್ರಕಾರ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಒಂದು ವೇಳೆ ಪಾಕಿಸ್ತಾನ ಫೈನಲ್‌ಗೇರಿದರೆ ಆ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸದ ಕಾರಣ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.