ನವದೆಹಲಿ, ಜ.13: ಮುಂದಿನ ತಿಂಗಳು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಟಿ 20 ವಿಶ್ವಕಪ್(T20 World Cup 2026)ಗಾಗಿ ನೆದರ್ಲ್ಯಾಂಡ್ಸ್ 15 ಸದಸ್ಯರ ತಂಡ(Netherlands T20 World Cup squad)ವನ್ನು ಪ್ರಕಟಿಸಿದೆ. ಸ್ಕಾಟ್ ಎಡ್ವರ್ಡ್ಸ್ ಮತ್ತೊಮ್ಮೆ ಮೆಗಾ ಟೂರ್ನಮೆಂಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಈ ಬಾರಿ ತಂಡವು ಹಿಂದಿನ ವರ್ಷಗಳಿಗಿಂತ ಬಹಳ ಭಿನ್ನವಾಗಿ ಕಾಣುತ್ತದೆ. ಇತ್ತೀಚಿನ ಪಂದ್ಯಗಳ ಪ್ರದರ್ಶನ ಆಧಾರದಲ್ಲಿ ಹಲವಾರು ಪ್ರಮುಖ ಕ್ರಿಕೆಟಿಗರನ್ನು ತಂಡದಿಂದ ಕೈಬಿಡಲಾಗಿದೆ.
ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್ ಯುರೋಪ್ ಪ್ರದೇಶದ ಫೈನಲ್‌ನಲ್ಲಿ ಆಡಿದ ನಂತರ ಬಾಂಗ್ಲಾದೇಶ ಸರಣಿಯನ್ನು ತಪ್ಪಿಸಿಕೊಂಡ ಆಟಗಾರರನ್ನು ಮರಳಿ ಕರೆಸಿಕೊಳ್ಳಲಾಗಿದೆ. ರೋಲೋಫ್ ವ್ಯಾನ್ ಡೆರ್ ಮೆರ್ವೆ, ಬಾಸ್ ಡಿ ಲೀಡೆ, ಮೈಕೆಲ್ ಲೆವಿಟ್ ಮತ್ತು ಜ್ಯಾಕ್ ಲಯನ್-ಕ್ಯಾಚೆಟ್ ಮತ್ತೆ ತಂಡಕ್ಕೆ ಪ್ರವೇಶಿದ್ದಾರೆ. ಅವರ ಸೇರ್ಪಡೆಯು ತಂಡಕ್ಕೆ ಹೆಚ್ಚಿನ ಬಲ ನೀಡಿದೆ.
ತಂಡವು ಇಬ್ಬರು ಹಿರಿಯ ಆಲ್‌ರೌಂಡರ್‌ಗಳನ್ನು ಸಹ ಮರಳಿ ಕರೆತಂದಿದೆ. 2024 ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಂತರ ಕಾಲಿನ್ ಅಕೆರ್ಮನ್ T20I ಕ್ರಿಕೆಟ್‌ಗೆ ಮರಳಿದ್ದಾರೆ. ಇಂಗ್ಲೆಂಡ್‌ನ 2025 ರ ವಿಟಾಲಿಟಿ ಬ್ಲಾಸ್ಟ್‌ನಲ್ಲಿ ಅವರು ಡರ್ಹ್ಯಾಮ್ ಪರ 14 ಪಂದ್ಯಗಳಲ್ಲಿ 304 ರನ್ ಗಳಿಸಿದರು. 34 ವರ್ಷದ ಟಿಮ್ ವ್ಯಾನ್ ಡೆರ್ ಗುಗ್ಟನ್ ಕೂಡ T20I ಗಳಿಂದ ಒಂದು ವರ್ಷ ದೂರವಿದ್ದು, ಹತ್ತು ಬ್ಲಾಸ್ಟ್ ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಜುಲೈ 2024 ರಲ್ಲಿ ನಡೆದ ಹಿಂದಿನ T20 ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ನೆದರ್‌ಲ್ಯಾಂಡ್ಸ್ ತಂಡವನ್ನು ಪ್ರತಿನಿಧಿಸಿದ್ದ ಲೋಗನ್ ವ್ಯಾನ್ ಬೀಕ್ ವೇಗದ ಬೌಲಿಂಗ್‌ನ ಆಳವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಂದಿನಿಂದ, ಅವರು ನ್ಯೂಜಿಲೆಂಡ್‌ನ ಸೂಪರ್ ಸ್ಮ್ಯಾಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೆಲ್ಲಿಂಗ್ಟನ್ ಪರ ಏಳು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪ್ರದರ್ಶನ ಅವರನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳುವಂತೆ ಮಾಡಿದೆ.
India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ!
ಎಡ್ವರ್ಡ್ಸ್ ತಂಡದ ಪ್ರಾಥಮಿಕ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದು, ಕೈಲ್ ಕ್ಲೈನ್ ಅವರನ್ನು ಮೀಸಲು ಆಯ್ಕೆಯಾಗಿ ಸೇರಿಸಿಕೊಳ್ಳಲಾಗಿದೆ. ಕ್ಲೈನ್ ಮತ್ತು ನೋಹ್ ಕ್ರೋಸ್ ಮಾತ್ರ ಟಿ20 ವಿಶ್ವಕಪ್‌ನಲ್ಲಿ ಇನ್ನೂ ಒಂದು ಪಂದ್ಯವನ್ನು ಆಡದ ತಂಡದ ಸದಸ್ಯರು.
ನೆದರ್ಲ್ಯಾಂಡ್ಸ್ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದ್ದು, ಫೆಬ್ರವರಿ 7 ರಂದು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಗುಂಪು ಹಂತವು ಫೆಬ್ರವರಿ 10 ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧ, ಫೆಬ್ರವರಿ 13 ರಂದು ಚೆನ್ನೈನಲ್ಲಿ ಯುಎಸ್ಎ ವಿರುದ್ಧ ಮತ್ತು ಫೆಬ್ರವರಿ 18 ರಂದು ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಆಡಲಿದೆ.
ನೆದರ್ಲ್ಯಾಂಡ್ಸ್ ತಂಡ
ಸ್ಕಾಟ್ ಎಡ್ವರ್ಡ್ಸ್ (ನಾಯಕ), ನೋಹ್ ಕ್ರೋಸ್ (ವಿ.ಕೀ.), ಮ್ಯಾಕ್ಸ್ ಒ'ಡೌಡ್, ಸಾಕಿಬ್ ಜುಲ್ಫಿಕರ್, ಆರ್ಯನ್ ದತ್, ಕೈಲ್ ಕ್ಲೈನ್, ಪಾಲ್ ವ್ಯಾನ್ ಮೀಕೆರೆನ್, ಫ್ರೆಡ್ ಕ್ಲಾಸೆನ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ಮೈಕೆಲ್ ಲೆವಿಟ್, ಝಾಕ್ ಲಯನ್-ಕ್ಯಾಚೆಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಟಿಮ್ ವ್ಯಾನ್ ಡೆರ್ ಗುಗ್ಟನ್.