ಲಿಂಕನ್, ಅ.27: ರೋಚಕ ಘಟ್ಟ ತಲುಪಿದ್ದ ಭಾರತ 'ಎ' ಮತ್ತು ನ್ಯೂಜಿಲೆಂಡ್ 'ಎ' ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯ ಬೆಳಕಿನ ಕೊರತೆಯಿಂದಾಗಿ ʼಡ್ರಾʼಗೊಂಡಿತು. ಗೆಲುವಿಗೆ ಕೇವಲ ಒಂದು ವಿಕೆಟ್ ದೂರದಲ್ಲಿದ್ದ ಭಾರತಕ್ಕೆ ನಿರಾಸೆ ಎದುರಾಯಿತು. ಆತಿಥೇಯ ತಂಡವು ಸೋಲಿನಿಂದ ಪಾರಾಯಿತು.
313 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ನ್ಯೂಜಿಲೆಂಡ್ 'ಎ' ತಂಡವು, 9 ವಿಕೆಟ್ಗೆ 187 ರನ್ ಗಳಿಸಿ ಸಂಕಷ್ಟದ ಸ್ಥಿತಿಯಲ್ಲಿತ್ತು. ಗೆಲ್ಲಲು ಆತಿಥೇಯ ತಂಡಕ್ಕೆ ಇನ್ನೂ 126 ರನ್ಗಳ ಅಗತ್ಯವಿತ್ತು, ಆದರೆ ಬೆಳಕು ಕಡಿಮೆಯಾದ ಕಾರಣ, ಅಂತಿಮ ವಿಕೆಟ್ ಪಡೆಯುವ ಅವಕಾಶ ಭಾರತ 'ಎ' ತಂಡಕ್ಕೆ ಸಿಗಲಿಲ್ಲ. ಕರ್ಟಿಸ್ ಹೀಫಿ 187 ಎಸೆತಗಳಲ್ಲಿ 90 ರನ್ಗಳೊಂದಿಗೆ (ಔಟಾಗದೆ) ಮತ್ತು ಜೇಡನ್ ಲೆನಾಕ್ಸ್ 24 ಎಸೆತಗಳಲ್ಲಿ 6 ರನ್ಗಳೊಂದಿಗೆ ಕ್ರೀಸ್ನಲ್ಲಿದ್ದರು.
ಮೊದಲ ಇನ್ನಿಂಗ್ಸ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ 'ಇಂಡಿಯಾ ಎ' ತಂಡವು, ಎರಡನೇ ಇನ್ನಿಂಗ್ಸ್ನಲ್ಲಿ ದೇವದತ್ ಪಡಿಕ್ಕಲ್ ಗಳಿಸಿದ ಭರ್ಜರಿ 199 ರನ್ಗಳ ನೆರವಿನಿಂದ ಬಲಿಷ್ಠ ಸ್ಥಿತಿಗೆ ಮರಳಿತು. ಮೊದಲ ಇನ್ನಿಂಗ್ಸ್ನಲ್ಲಿ 113 ರನ್ಗಳಿಗೆ ಆಲೌಟ್ ಆಗಿದ್ದ ಪ್ರವಾಸಿ ತಂಡವು, ಎರಡನೇ ಇನ್ನಿಂಗ್ಸ್ನಲ್ಲಿ 516 ರನ್ಗಳನ್ನು ಕಲೆಹಾಕುವ ಮೂಲಕ 'ನ್ಯೂಜಿಲೆಂಡ್ ಎ' ತಂಡಕ್ಕೆ ಕಠಿಣ ಗುರಿಯನ್ನು ನೀಡಿತು.
ಬ್ಯಾಲನ್ ಡಿ'ಓರ್ ಗೆದ್ದ ಸ್ನೇಹಿತ ಹ್ಯಾರಿ ಕೇನ್ ಕುರಿತು ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಪೋಸ್ಟ್
ಎರಡನೇ ಇನಿಂಗ್ಸ್ನಲ್ಲಿ ಪಡಿಕ್ಕಲ್ ಆಟವು ತಂಡವು ಚೇತರಿಸಿಕೊಳ್ಳಲು ಆಧಾರವಾಯಿತು. ಇತ್ತ ಬಿ. ಸಾಯಿ ಸುದರ್ಶನ್, ಯಶ್ ರಾಥೋಡ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕಗಳು, 'ಇಂಡಿಯಾ ಎ' ತಂಡವು ಗಣನೀಯ ಮುನ್ನಡೆ ಸಾಧಿಸಲು ನೆರವಾದವು.
ಭಾರತೀಯ ಬೌಲರ್ಗಳ ಪೈಕಿ ಔಕಿಬ್ ನಬಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ 69 ರನ್ಗಳಿಗೆ ಮೂರು ವಿಕೆಟ್ಗಳನ್ನು ಪಡೆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ಮೂರು ವಿಕೆಟ್ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸುವ ಮೂಲಕ ಅಂಶುಲ್ ಕಂಬೋಜ್ ಕೂಡ ಗಮನ ಸೆಳೆದರು.
ಭಾರತದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಇಬ್ಬರೂ ಬ್ಯಾಟಿಂಗ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು. ಅಕ್ಟೋಬರ್ 31 ರಂದು ಕ್ರೈಸ್ಟ್ಚರ್ಚ್ನಲ್ಲಿ ಆರಂಭವಾಗಲಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಅವರು ತಮ್ಮ ಈ ಪ್ರದರ್ಶನವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ.