ಕ್ರೈಸ್ಟ್ಚರ್ಚ್, ನ.26: ನ್ಯೂಜಿಲೆಂಡ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ ಮೊಹಮ್ಮದ್ ಸಿರಾಜ್ಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರ ಪ್ರಕಾರ, ಈ ಹಿರಿಯ ವೇಗದ ಬೌಲರ್ ಆಡುವ ಹನ್ನೊಂದರ ಬಳಗಕ್ಕೆ ಮರಳುವ ಮುನ್ನ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ.
ಭಾರತ ತಂಡವು ಕೈಗೊಂಡ ಹಿಂದಿನ ವಿದೇಶಿ ಪ್ರವಾಸದಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದರೂ, ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಿಂದ ಸಿರಾಜ್ ಅವರನ್ನು ಕೈಬಿಡಲಾಯಿತು. ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಐದು ಟೆಸ್ಟ್ ಪಂದ್ಯಗಳಲ್ಲಿ 32 ವರ್ಷದ ಈ ಆಟಗಾರ 23 ವಿಕೆಟ್ಗಳನ್ನು ಕಬಳಿಸಿದ್ದರು. ಹೀಗಿದ್ದರೂ ಅವರನ್ನು ಮೊದಲ ಟೆಸ್ಟ್ನಿಂದ ಕೈಬಿಡಲಾಗಿತ್ತು. ಸಿರಾಜ್ಗೆ ಅವಕಾಶ ನೀಡದ ಕುರಿತು ಅನೇಕ ಮಾಜಿ ಆಟಗಾರರು ಪ್ರಶ್ನೆ ಮಾಡಿದ್ದರು. ಮಾತ್ರವಲ್ಲದೆ ಈ ವಿಚಾರ ರಾಜಕೀಯವಾಗಿಯೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಕ್ರೈಸ್ಟ್ಚರ್ಚ್ ಟೆಸ್ಟ್ ಪಂದ್ಯದ ಮುನ್ನಾದಿನದಂದು, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಕೆಲ್, ಸಿರಾಜ್ ಅವರನ್ನು ವಿಶ್ವದರ್ಜೆಯ ಬೌಲರ್ ಎಂದು ಬಣ್ಣಿಸಿದರಾದರೂ, ಈ ವೇಗದ ಬೌಲರ್ ತಮ್ಮ ಆಟದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಮತ್ತು ತಂಡಕ್ಕೆ ಮರಳಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳಬೇಕಿದೆ ಎಂದು ಒತ್ತಿ ಹೇಳಿದರು.
ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ಔಟ್; ಒಂದೂ ಬಾಲ್ ಎದುರಿಸದೆ ಬೌಲ್ಡ್ ಆದ ವಿಂಡೀಸ್ ಆಟಗಾರ್ತಿ
"ನನ್ನ ಪ್ರಕಾರ, ಅವರು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಅವರು ವಿಶ್ವ ದರ್ಜೆಯ ಬೌಲರ್. ಆಯ್ಕೆಯ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟಕರವಾದ ಸಂಗತಿ. ಇದು ಸುಲಭವಲ್ಲ. ನಮ್ಮ ಪಾಲಿಗೆ, ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿರುವುದಷ್ಟೇ ಮುಖ್ಯ," ಎಂದು ಮಾರ್ಕೆಲ್ ಹೇಳಿದರು.
"ನಾವೀಗ ಸ್ವಲ್ಪ ಹಿಂದೆ ಸರಿದು ಯೋಚಿಸೋಣ. ನಾವೀಗ ಎಲ್ಲಿದ್ದೇವೆಯೋ, ಅಲ್ಲೇ ಇದ್ದೇವೆ. ಎಲ್ಲಿ ಸುಧಾರಣೆ ಮಾಡಿಕೊಳ್ಳಬಹುದು ಮತ್ತು ಹೇಗೆ ಇನ್ನೂ ಉತ್ತಮವಾಗಬಹುದು ಎಂಬುದನ್ನು ನೋಡೋಣ. ತಂಡದ ಆಯ್ಕೆ ನಮ್ಮ ಕೈಯಲ್ಲಿಲ್ಲ. ಆದರೆ, ಈಗ ನಮ್ಮ ಕೈಯಲ್ಲಿರುವುದೇನೆಂದರೆ, ಆಡುತ್ತಿರುವ ಆಟಗಾರರಿಗೆ ನಮ್ಮ ಬೆಂಬಲ ಮತ್ತು ಹುರುಪನ್ನು ನೀಡುವುದು' ಎಂದು ಹೇಳಿದರು.
ಸಿರಾಜ್ ತಮ್ಮ ವೈಯಕ್ತಿಕ ಆಟವನ್ನು ಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ತಮ್ಮ ವೃತ್ತಿಜೀವನದ ಮುಂದಿನ ಹಂತಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಹಾಯ ಮಾಡುವುದರ ಮೇಲೆ ಈಗ ಗಮನ ಕೇಂದ್ರೀಕರಿಸಲಾಗಿದೆ ಎಂದು ಮಾರ್ಕೆಲ್ ಹೇಳಿದರು.
"ಹೌದು, ಇದು ಅವರ ವೈಯಕ್ತಿಕ ಆಟವನ್ನು ಅವಲೋಕಿಸುವುದಕ್ಕೆ, ಪ್ರಸ್ತುತ ಅವರು ಯಾವ ಹಂತದಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ಮತ್ತು ತಂಡದಲ್ಲಿ ಸ್ಥಾನ ಪಡೆಯಲು ಅವರಿಗೆ ಯಾವುದು ಅತ್ಯುತ್ತಮ ಮಾರ್ಗ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಂಬಂಧಿಸಿದೆ. ಇದಕ್ಕಾಗಿ ಶ್ರಮಿಸುವುದು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ," ಎಂದು ಹೇಳಿದರು.