ವೆಲ್ಲಿಂಗ್ಟನ್, ನ.21: ಕನ್ನಡಿಗ ಕೆ.ಎಲ್ ರಾಹುಲ್(136) ಅವರ ಸೊಗಸಾದ ಶತಕ, ದೇವದತ್ತ ಪಡಿಕ್ಕಲ್(80) ಮತ್ತು ನಾಯಕ ಶುಭಮನ್ ಗಿಲ್(98) ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 486 ರನ್ ಗಳಿಸಿ 118 ರನ್ಗಳ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಎರಡನೇ ದಿನದಾಟದಲ್ಲಿ ಅರ್ಧಶತಕ ಬಾರಿಸಿದ್ದ ರಾಹುಲ್, ಮೂರನೇ ದಿನವಾದ ಶನಿವಾರ ಶತಕ ಬಾರಿಸಿ ಸಂಭ್ರಮಿಸಿದರು. ನ್ಯೂಜಿಲೆಂಡ್ ತಂಡದ ವೇಗದ ಜೋಡಿ ಮ್ಯಾಟ್ ಹೆನ್ರಿ ಮತ್ತು ಕೈಲ್ ಜೆಮಿಸನ್ ಘಾತಕ ಬೌನ್ಸರ್ ಎಸೆಯುವ ಮೂಲಕ ಕಠಿಣ ಸವಾಲೊಡ್ಡಿದರು. ನಿಖರ ಲೈನ್ ಮತ್ತು ಲೆಂಗ್ತ್ನಲ್ಲಿ ಹಾಕುತ್ತಿದ್ದ ಎಸೆತಗಳು ಬ್ಯಾಟರ್ಗಳನ್ನು ಆಡಲು ಕೆಣಕುವುದರ ಮೂಲಕ ಪರೀಕ್ಷೆಗೊಡ್ಡುತ್ತಿದ್ದವು. ಹೆಜ್ಜೆಹೆಜ್ಜೆಗೂ ಎದುರಾದ ಇಂತಹ ಸವಾಲುಗಳನ್ನು ಮೀರಿ ನಿಲ್ಲುವಲ್ಲಿ ರಾಹುಲ್ ಮತ್ತು ಪಡಿಕ್ಕಲ್ ಯಶಸ್ವಿಯಾದರು.
ಉಭಯ ಆಟಗಾರರು ಬೌಲರ್ಗಳ ಉತ್ತಮ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ವಿಕೆಟ್ ಉಳಿಸುವ ಜತೆಗೆ ತಂಡದ ಮೊತ್ತವನ್ನು ಏರಿಸಿದರು. 290 ಎಸೆತಗಳನ್ನು ಎದುರಿಸಿದ ರಾಹುಲ್ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ನಡೆಸಿ 2 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 136 ರನ್ ಗಳಿಸಿದರು. ಪಡಿಕ್ಕಲ್ ಜತೆ ಸೇರಿಕೊಂಡು ಎರಡನೇ ವಿಕೆಟ್ಗೆ 165 ರನ್ಗಳ ಜತೆಯಾಟದಲ್ಲಿ ಭಾಗಿಯಾದರು.
ಮೂರನೇ ಭಾರತೀಯ
ರಾಹುಲ್ ನ್ಯೂಜಿಲೆಂಡ್ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಮೂರನೇ ಭಾರತೀಯ ಆಟಗಾರ ಎನಿಸಿದರು. ಸುನಿಲ್ ಗವಾಸ್ಕರ್ ಮತ್ತು ಸುರಿಂದರ್ ಅಮರ್ನಾಥ್ ಮೊದಲಿಗರು.
ಸೆನಾ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ನಾಲ್ಕೂ ದೇಶಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್ (ಓಪನರ್) ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾದರು. ಒಟ್ಟಾರೆ ಏಷ್ಯಾದ ಎರಡನೇ ಬ್ಯಾಟರ್ ಎನಿಸಿದರು. ಪಾಕಿಸ್ತಾನದ ಸಯೀದ್ ಅನ್ವರ್ ಮೊದಲಿಗ.
ಹೆನ್ಸಿ ನಿಕೋಲ್ಸ್ ಕ್ಯಾಚ್ ಕೈಚೆಲ್ಲಿ ಟೀಕೆಗೆ ಗುರಿಯಾಗಿದ್ದ ಪಡಿಕ್ಕಲ್ ತಮ್ಮ ಈ ತಪ್ಪಿಗೆ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ನೆರವಾದರು. ರಾಹುಲ್ ಜತೆ ಉತ್ತಮ ಬ್ಯಾಟಿಂಗ್ ನಡೆಸಿದ ಅವರು, ಅರ್ಧಶತಕ ಬಾರಿಸಿದರು. ಆದರೆ 80 ರನ್ ಗಳಿಸಿದ್ದ ವೇಳೆ ಕೈಲ್ ಜಾಮಿಸನ್ ಎಸೆದ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ವಿಕೆಟ್ ಕಳೆದುಕೊಂಡರು.
ಪಡಿಕ್ಕಲ್ ವಿಕೆಟ್ ಪತನದ ಬಳಿಕ ನಾಯಕ ಶುಭಮನ್ ಗಿಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಆದರೆ ಶತಕದ ಅಂಚಿನಲ್ಲಿ ಎಡವಿದರು. 98ರನ್ಗೆ ಔಟಾಗುವ ಮೂಲಕ ಕೇವಲ ಎರಡು ರನ್ ಅಂತರದಿಂದ ಶತಕ ವಂಚಿತರಾದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತು.
ʻನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲʼ: ಎಂಎಸ್ ಧೋನಿಯ ಹೊಸ ಜವಾಬ್ದಾರಿಯ ಬಗ್ಗೆ ಜಹೀರ್ ಖಾನ್ ಪ್ರತಿಕ್ರಿಯೆ!
94 ವರ್ಷಗಳಲ್ಲಿ ಇದೇ ಮೊದಲು!
ಭಾರತದ ಎಲ್ಲಾ ಐವರು ಅಗ್ರ ಕ್ರಮಾಂಕದ ಬ್ಯಾಟರ್ಗಳು ಕನಿಷ್ಠ ಅರ್ಧಶತಕವನ್ನು ಗಳಿಸಿದರು. 94 ವರ್ಷಗಳಲ್ಲಿ ಭಾರತದ ಅಗ್ರ ಐದು ಬ್ಯಾಟರ್ಗಳು ವಿದೇಶಿ ಟೆಸ್ಟ್ ಇನ್ನಿಂಗ್ಸ್ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. ಆದರೆ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಭಾರತದ ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳೂ 50 ರನ್ಗಳ ಗಡಿಯನ್ನು ದಾಟಿದ ಐದನೇ ನಿದರ್ಶನ ಇದಾಗಿದೆ. ತವರಿನಲ್ಲಿ ನಾಲ್ಕು ಬಾರಿ ಈ ಸಾಧನೆ ಮಾಡಿತ್ತು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್, ಮೊದಲ ಇನಿಂಗ್ಸ್ನಲ್ಲಿ 368; (ಹೆನ್ರಿ ನಿಕೋಲ್ಸ್(175), ಗ್ಲೆನ್ ಫಿಲಿಪ್ಸ್(118), ಜಸ್ಪ್ರೀತ್ ಬುಮ್ರಾ 92ಕ್ಕೆ 4, ಆಕಾಶ್ದೀಪ್ 53ಕ್ಕೆ 3, ಕಾಂಬೋಜ್ 69ಕ್ಕೆ 2.
ಭಾರತ ಮೊದಲ ಇನಿಂಗ್ಸ್, 4ಕ್ಕೆ 486 ಬ್ಯಾಟಿಂಗ್; (ಕೆ.ಎಲ್ ರಾಹುಲ್(136), ಯಶಸ್ವಿ ಜೈಸ್ವಾಲ್ (85), ದೇವದತ್ತ ಪಡಿಕ್ಕಲ್(80), ಶುಭಮನ್ ಗಿಲ್(98), ರಿಷಭ್ ಪಂತ್ ಬ್ಯಾಟಿಂಗ್(55), ಮ್ಯಾಟ್ ಹೆನ್ರಿ 86ಕ್ಕೆ 1, ಕೈಲ್ ಜಾಮಿಸನ್ 57ಕ್ಕೆ 1)