ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಮಾಜಿ ಹಾಕಿ ಆಟಗಾರ ಎಂ ಎಂ ಸೋಮಯ್ಯ ಮನೆಗೆ ಕನ್ನ: 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ಕಳವು!

ಮಾಜಿ ಭಾರತೀಯ ಹಾಕಿ ಆಟಗಾರ ಎಂ ಎಂ ಸೋಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದೆ. 1980ರ ಮಾಸ್ಕೋ ಒಲಿಂಪಿಕ್ಸ್ ಚಿನ್ನದ ಪದಕ ಸೇರಿದಂತೆ ನಾಲ್ಕು ಅಂತಾರಾಷ್ಟ್ರೀಯ ಪದಕಗಳು, ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ.

ಎಂಎಂ ಸೋಮಯ್ಯ ಅವರ ಒಲಿಂಪಿಕ್ಸ್‌ ಚಿನ್ನದ ಪದಕ ಕಳ್ಳತನ.

ಬೆಂಗಳೂರು: ಭಾರತದ ಮಾಜಿ ಹಾಕಿ ಆಟಗಾರ ಎಂ.ಎಂ. ಸೋಮಯ್ಯ (MM Somaiah) ಅವರ ಬೆಂಗಳೂರಿನ ನಿವಾಸದಲ್ಲಿ ಕಳ್ಳತನ ನಡೆದಿದ್ದು, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ(Olympics 1980) ಭಾರತ ಹಾಕಿ ತಂಡ ಗೆದ್ದಿದ್ದ ಚಿನ್ನದ ಪದಕ ಸೇರಿದಂತೆ ಹಲವು ಅಮೂಲ್ಯ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋಮಯ್ಯ ಅವರು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.

ಕುಟುಂಬದ ಸದಸ್ಯರೊಂದಿಗೆ ಸೋಮಯ್ಯ ಅವರು ತಮ್ಮ ಸ್ವಂತ ಊರಾದ ಕೊಡಗಿಗೆ ತೆರಳಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಅಕ್ಟೋಬರ್ 25ರಿಂದ 28ರ ನಡುವಿನ ಅವಧಿಯಲ್ಲಿ ಇಂದಿರಾನಗರ ಪ್ರದೇಶದ ಹೊಸ ತಿಪ್ಪಸಂದ್ರದಲ್ಲಿರುವ ಅವರ ಮನೆಯನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ.

ಅಕ್ಟೋಬರ್ 25ರಂದು ಸಂಜೆ ಸುಮಾರು 5 ಗಂಟೆಗೆ ಮನೆಯಿಂದ ಹೊರಟಿದ್ದ ಸೋಮಯ್ಯ ಅವರು ಅಕ್ಟೋಬರ್ 28ರಂದು ಬೆಳಗ್ಗೆ 7.15ರ ಸುಮಾರಿಗೆ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯ ಬೀಗ ಮುರಿದು ಒಳನುಗ್ಗಿದ್ದ ಅಪರಿಚಿತರು ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ನೆರೆಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಕ್ಟೋಬರ್ 28ರಂದು ಮುಂಜಾನೆ 2.34ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸೋಮಯ್ಯ ಅವರ ಮನೆಗೆ ಪ್ರವೇಶಿಸಿರುವುದು ಕಂಡುಬಂದಿದೆ.

WPL 2027 schedule: ಮಹಿಳಾ ಪ್ರೀಮಿಯರ್‌ ಲೀಗ್‌ ಸಂಪೂರ್ಣ ವೇಳಾಪಟ್ಟಿ, ಜ 14 ರಂದು ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಮುಖಾಮುಖಿ!

ಪೊಲೀಸ್ ಎಫ್‌ಐಆರ್ ಪ್ರಕಾರ, ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನೀಲಿ ಬಣ್ಣದ ಅಂಗಿ ಹಾಗೂ ಮತ್ತೊಬ್ಬ ಕೆಂಪು ಬಣ್ಣದ ಅಂಗಿ ಧರಿಸಿದ್ದನು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಮಯ್ಯ ಅವರು ಭಾರತವನ್ನು ಪ್ರತಿನಿಧಿಸಿ ವಿವಿಧ ಅಂತಾರಾಷ್ಟ್ರೀಯ ಹಾಕಿ ಟೂರ್ನಿಗಳಲ್ಲಿ ಗೆದ್ದಿದ್ದ ನಾಲ್ಕು ಪದಕಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡ ಗೆದ್ದಿದ್ದ ಚಿನ್ನದ ಪದಕ.

ಕಳುವಾಗಿರುವ ಇತರ ಪದಕಗಳ ವಿವರ ಹೀಗಿದೆ

- 1980ರ ಮಾಸ್ಕೋ ಒಲಿಂಪಿಕ್ಸ್: ಚಿನ್ನದ ಪದಕ

- 1982ರ ಏಷ್ಯನ್ ಗೇಮ್ಸ್ (ನವದೆಹಲಿ): ಬೆಳ್ಳಿ ಪದಕ

- 1986ರ ಏಷ್ಯನ್ ಗೇಮ್ಸ್ (ಸಿಯೋಲ್): ಕಂಚಿನ ಪದಕ

- 1982ರ ಚಾಂಪಿಯನ್ಸ್ ಟ್ರೋಫಿ (ಆಮ್‌ಸ್ಟರ್‌ಡ್ಯಾಮ್): ಕಂಚಿನ ಪದಕ

IND vs NZ: ಸಚಿನ್‌ ತೆಂಡೂಲ್ಕರ್‌ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದ ಐತಿಹಾಸಿಕ ತಂಡದ ಭಾಗವಾಗಿದ್ದ ಸೋಮಯ್ಯ ಅವರಿಗೆ ಈ ಪದಕ ಅತ್ಯಂತ ಮಹತ್ವದ್ದಾಗಿತ್ತು. ಹೀಗಾಗಿ ಪದಕ ಕಳುವಾಗಿರುವುದು ಕ್ರೀಡಾ ವಲಯದಲ್ಲಿ ಆತಂಕ ಮೂಡಿಸಿದೆ. ಪದಕಗಳ ಜತೆಗೆ ಚಿನ್ನದ ಆಭರಣಗಳು, ಹಲವು ಬೆಳ್ಳಿ ವಸ್ತುಗಳು ಹಾಗೂ 30 ಸಾವಿರ ರೂಪಾಯಿ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳುವಾಗಿರುವ ಒಟ್ಟು ಆಸ್ತಿಯ ಮೌಲ್ಯವನ್ನು ಸುಮಾರು 3.53 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸೋಮಯ್ಯ ಅವರ ದೂರಿನ ಆಧಾರದ ಮೇಲೆ ಇಂದಿರಾನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 331(4) ಮತ್ತು 305ರ ಅಡಿಯಲ್ಲಿ ಮನೆಗೆ ಅಕ್ರಮವಾಗಿ ನುಗ್ಗಿ ಕಳ್ಳತನ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಳುವಾಗಿರುವ ವಸ್ತುಗಳನ್ನು ವಶಪಡಿಸಿಕೊಳ್ಳಲು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.