ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IOA Elections: 'ಅಭ್ಯರ್ಥಿಗಳಿಂದ ಬಲವಂತವಾಗಿ ಹಿಂದೆ ಸರಿಯುವಂತೆ ಮಾಡಲಾಗಿದೆ'- ಅಶ್ವಿನಿ ನಾಚಪ್ಪ ಗಂಭೀರ ಆರೋಪ!

ಐಒಎಯ ಸ್ಪೋರ್ಟ್ಸ್‌ಪರ್ಸನ್ಸ್ ಆಫ್ ಮೆರಿಟ್ ಚುನಾವಣೆಯಿಂದ ಬಾಹ್ಯ ಒತ್ತಡದ ಕಾರಣ ಹಿಂದೆ ಸರಿಯಬೇಕಾಯಿತು ಎಂದು ಮಾಜಿ ಓಟಗಾರ್ತಿ ಅಶ್ವಿನಿ ನಾಚಪ್ಪ ಆರೋಪಿಸಿದ್ದಾರೆ. ಚುನಾವಣೆಯ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಪ್ರಶ್ನಿಸಿರುವ ಅವರು, ಭಾರತೀಯ ಕ್ರೀಡಾ ಆಡಳಿತದ ನೈತಿಕ ಮೌಲ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಒಲಿಂಪಿಕ್ ಸಂಸ್ಥೆಯ ಚುನಾವಣೆಗಳ ಅಶ್ವಿನಿ ನಾಚಪ್ಪ ಗಂಭೀರ ಆರೋಪ.

ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಪ್ರಕ್ರಿಯೆಯ ಕುರಿತು ಭಾರತೀಯ ಮಾಜಿ ಓಟಗಾರ್ತಿ ಅಶ್ವಿನಿ ನಾಚಪ್ಪ (Ashwini Nachappa) ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದ ಅಭ್ಯರ್ಥಿಗಳ ನಿರ್ಧಾರ ಸ್ವಯಂಪ್ರೇರಿತವಾಗಿರಲಿಲ್ಲ, ಅವರ ಮೇಲೆ ಬಾಹ್ಯ ಒತ್ತಡ ಹೇರಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಐಒಎಯ ಸ್ಪೋರ್ಟ್ಸ್‌ಪರ್ಸನ್ಸ್ ಆಫ್ ಮೆರಿಟ್ (SOM) ಚುನಾವಣೆಯಲ್ಲಿ ಮಹಿಳೆಯರ ನಾಲ್ಕು ಸ್ಥಾನಗಳಿಗೆ ಆರಂಭದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ನವೆಂಬರ್ 7ರಂದು ಅಶ್ವಿನಿ ನಾಚಪ್ಪ ಸೇರಿದಂತೆ ಐವರು ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದ ಆರು ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿ ಉಳಿದರು. ಈ ಚುನಾವಣೆ ಸೋಮವಾರ ಆನ್‌ಲೈನ್ ಮೂಲಕ ನಡೆಯಿತು.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ 59ರ ವಯಸ್ಸಿನ ನಾಚಪ್ಪ, ತಮಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ. ಹಿಂದೆ ಸರಿದ ಎಲ್ಲ ಅಭ್ಯರ್ಥಿಗಳ ಮೇಲೂ ಬಾಹ್ಯ ಒತ್ತಡವಿತ್ತು. ಇದು ಸ್ವಯಂಪ್ರೇರಿತ ನಿರ್ಧಾರವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಒತ್ತಡದ ಹಿಂದೆ ಯಾರಿದ್ದರು ಅಥವಾ ಯಾವ ರೀತಿಯಲ್ಲಿ ಒತ್ತಡ ಹೇರಲಾಯಿತು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.

IND vs NZ: ನಾಲ್ಕನೇ ಒಡಿಐಗೆ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ವಿವರ!

ನ್ಯಾಯಸಮ್ಮತ ವಾತಾವರಣವಿದ್ದಿದ್ದರೆ ತಾವು ಸ್ಪರ್ಧೆಯಲ್ಲಿ ಮುಂದುವರಿಯುತ್ತಿದ್ದೆ ಎಂದು ನಾಚಪ್ಪ ಹೇಳಿದ್ದಾರೆ. ಒಲಿಂಪಿಕ್ ಕ್ರೀಡೆಯ ಮೂಲ ಮೌಲ್ಯಗಳು ಮತ್ತು ನೈತಿಕತೆ ಮರೆಯಾಗುತ್ತಿವೆ. ಭಾರತೀಯ ಕ್ರೀಡಾ ಆಡಳಿತದಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೆ. ಆದರೆ ನ್ಯಾಯಯುತ ಪ್ರಕ್ರಿಯೆ ಇಲ್ಲವೆಂದು ಭಾವಿಸಿ ಹಿಂದೆ ಸರಿಯಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಿ.ಟಿ ಉಷಾಗೆ ಹಿನ್ನಡೆ

ಈ ಚುನಾವಣೆಯಲ್ಲಿ ಹಾಲಿ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮಹಿಳೆಯರ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಗೆಲ್ಲಲು ವಿಫಲರಾದರು. ಅವರು 40 ಮತಗಳನ್ನು ಪಡೆದು ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಂಜು ಬಾಬಿ ಜಾರ್ಜ್ (53), ರಾಣಿ ರಾಮ್‌ಪಾಲ್ (50), ದೋಲಾ ಬ್ಯಾನರ್ಜಿ (45) ಮತ್ತು ಸೈನಾ ನೆಹ್ವಾಲ್ (43) ನಾಲ್ಕು ಸ್ಥಾನಗಳನ್ನು ಗೆದ್ದರು.

ಈ ಫಲಿತಾಂಶದಿಂದ ಉಷಾ ಅವರ ಎರಡನೇ ಅವಧಿಗೆ ಅಧ್ಯಕ್ಷರಾಗುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಆದರೂ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ನಾಮನಿರ್ದೇಶನದ ಮೂಲಕ ಸಾಮಾನ್ಯ ಸಭೆಗೆ ಪ್ರವೇಶಿಸುವ ಅವಕಾಶ ಅವರಿಗಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರಿಷಭ್‌ ಪಂತ್ ಫಿಟ್

ಚುನಾವಣೆಯಲ್ಲಿ ಅಕ್ರಮದ ಆರೋಪ

ಚುನಾವಣಾ ಪ್ರಕ್ರಿಯೆ ಈಗಾಗಲೇ ಹಲವು ಆರೋಪಗಳಿಂದ ಸುತ್ತುವರಿದಿದೆ. ಮಾಜಿ ಬಿಲ್ಲುಗಾರ್ತಿ ದೋಲಾ ಬ್ಯಾನರ್ಜಿ ಅವರು 'ನ್ಯೂ ಭಾರತ್ ಪ್ಯಾನೆಲ್' ಪರವಾಗಿ ಮತಯಾಚಿಸುವ ವಾಟ್ಸಾಪ್ ಸಂದೇಶ ಹರಿಬಿಟ್ಟಿದ್ದಾರೆ ಎಂದು ಪಿ.ಟಿ. ಉಷಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಇನ್ನೊಂದೆಡೆ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್ ಸತೀಶ್ ಶಿವಲಿಂಗಂ ಕೂಡ ಮತದಾರರ ಮೇಲೆ ಪ್ರಭಾವ ಬೀರುವ ಸಂಘಟಿತ ಪ್ರಯತ್ನ ನಡೆದಿದೆ ಮತ್ತು ಐಒಎ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ಭಾರತವನ್ನು ಎರಡು ಏಷ್ಯನ್ ಗೇಮ್ಸ್‌ಗಳಲ್ಲಿ ಪ್ರತಿನಿಧಿಸಿರುವ ಅಶ್ವಿನಿ ನಾಚಪ್ಪ, ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದೀಗ ಅವರು ಕರ್ನಾಟಕದಲ್ಲಿರುವ ತಮ್ಮ ಶಿಕ್ಷಣ ಸಂಸ್ಥೆಯ ನಿರ್ವಹಣೆಯತ್ತ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಐಒಎ ಕಾರ್ಯಕಾರಿ ಮಂಡಳಿಯ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದ್ದು, ಇತ್ತೀಚಿನ ಆರೋಪಗಳು ಸಂಸ್ಥೆಯ ಆಡಳಿತ ಮತ್ತು ನಾಯಕತ್ವ ಬದಲಾವಣೆಯ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.