ನವದೆಹಲಿ: ಆಯ್ಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಮಿಶ್ರ 4x400 ಮೀಟರ್ ರಿಲೇಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿದೆ. ಕೊನೆಯ ಲೆಗ್‌ನಲ್ಲಿ ವಿದ್ಯಾ ರಾಮರಾಜ್ (Vithya Ramraj) ಅವರ ಅದ್ಭುತ ಪ್ರದರ್ಶನ ಭಾರತಕ್ಕೆ ಎರಡನೇ ಸ್ಥಾನ ತಂದುಕೊಟ್ಟಿತು. ಬಹ್ರೇನ್ ಚಿನ್ನದ ಪದಕ ಗೆದ್ದಿತು. ವಿಶಾಲ್ ತೆನ್ನರಸು, ಪೂವಮ್ಮ ರಾಜು, ಮನು ಟಿಎಸ್ ಹಾಗೂ ವಿದ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ ಫೈನಲ್‌ನಲ್ಲಿ 4/400 ಓಟವನ್ನು ಪೂರ್ಣಗೊಳಿಸಲು 3:14.46 ಸಮಯ ತೆಗೆದುಕೊಂಡಿತು. ಇದರೊಂದಿಗೆ 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಬೆಳ್ಳಿ ಪದಕವನ್ನು ಭಾರತ ಯಶಸ್ವಿಯಾಗಿ ಉಳಿಸಿಕೊಂಡಿದೆ. ಈ ಬೆಳ್ಳಿ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಭಾರತ ಪರ ಓಟವನ್ನು ಆರಂಭಿಸಿದ ವಿಶಾಲ್ ತೆನ್ನರಸು ಆರಂಭಿಕ ಹಂತದಲ್ಲಿ ಹೆಚ್ಚಿನ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಬಳಿಕ ಪೂವಮ್ಮ ರಾಜು ಜವಾಬ್ದಾರಿ ವಹಿಸಿಕೊಂಡರು. ಒಂದು ಹಂತದಲ್ಲಿ ಭಾರತ ಪದಕದ ಸ್ಥಾನಗಳಿಂದ ಹೊರಬೀಳುವ ಭೀತಿ ಎದುರಾಗಿತ್ತು. ಆದರೆ ಕೊನೆಯ 50 ಮೀಟರ್‌ಗಳಲ್ಲಿ ಪೂವಮ್ಮ ವೇಗ ಹೆಚ್ಚಿಸಿ ತಂಡವನ್ನು ಮತ್ತೆ ಸ್ಪರ್ಧೆಗೆ ತಂದು, ಭಾರತವನ್ನು ಮೂರನೇ ಸ್ಥಾನದಲ್ಲಿರಿಸಿ ಬ್ಯಾಟನ್ ಅನ್ನು ಮನು ಟಿಎಸ್ ಅವರಿಗೆ ಹಸ್ತಾಂತರಿಸಿದರು.
ಏಷ್ಯನ್ ಗೇಮ್ಸ್: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಪುರುಷರ ಕಬಡ್ಡಿ ತಂಡ
ವಿದ್ಯಾ ರಾಮರಾಜ್ ಅವರ ಅದ್ಭುತ ಓಟ
ಮನು ಟಿಎಸ್ ಭಾರತವನ್ನು ಪದಕದ ರೇಸ್‌ನಲ್ಲಿ ಗಟ್ಟಿಯಾಗಿ ಉಳಿಸಿ, ಅಂತಿಮ ಲೆಗ್‌ಗಾಗಿ ಬ್ಯಾಟನ್ ಅನ್ನು ವಿದ್ಯಾ ರಾಮರಾಜ್ ಅವರಿಗೆ ಹಸ್ತಾಂತರಿಸಿದರು. ಬಲಿಷ್ಠ ಫಿನಿಶಿಂಗ್ ಸಾಮರ್ಥ್ಯಕ್ಕೆ ಹೆಸರಾದ ಭಾರತೀಯ ಆಂಕರ್ ಮತ್ತೊಮ್ಮೆ ಅದ್ಭುತ ಅಂತಿಮ ಲ್ಯಾಪ್ ಓಡಿದರು. ಒಂದು ಹಂತದಲ್ಲಿ ಭಾರತ ಕಂಚಿನ ಪದಕದತ್ತ ಸಾಗುತ್ತಿರುವಂತೆ ಕಂಡರೂ, ಕೊನೆಯ ಹಂತದಲ್ಲಿ ವಿದ್ಯಾ ಸೂಕ್ತ ಸಮಯದಲ್ಲಿ ವೇಗ ಹೆಚ್ಚಿಸಿದರು. ಅದ್ಭುತ ದಾಳಿಯೊಂದಿಗೆ ಕಂಚಿನ ಸ್ಥಾನವನ್ನು ಹಿಂದಿಕ್ಕಿದ ಅವರು ಭಾರತವನ್ನು ಎರಡನೇ ಸ್ಥಾನಕ್ಕೆ ಏರಿಸಿದರು.
ಬಹ್ರೇನ್ ತಂಡ ಈಗಾಗಲೇ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಅಂತಿಮ ಲೆಗ್‌ನಲ್ಲಿ ಓಟ ನಡೆಸಿದ ಸಲ್ವಾ ಈದ್ ನಾಸರ್ ತಂಡವನ್ನು ಚಿನ್ನದ ಪದಕದತ್ತ ಮುನ್ನಡೆಸಿದರು. ಬಹ್ರೇನ್ 3:12.87 ಸೆಕೆಂಡ್‌ಗಳಲ್ಲಿ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದಿತು. ಭಾರತ 3:14.46 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದರೆ, ವಿಯೆಟ್ನಾಂ 3:14.54 ಸೆಕೆಂಡ್‌ಗಳಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಈ ಫಲಿತಾಂಶದೊಂದಿಗೆ ಮಿಶ್ರ 4x400 ಮೀಟರ್ ರಿಲೇಯಲ್ಲಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ ಬೆಳ್ಳಿ ಪದಕವನ್ನು ಭಾರತ ಮತ್ತೊಮ್ಮೆ ಉಳಿಸಿಕೊಂಡಿತು. ಭಾರತೀಯ ಅಥ್ಲೆಟಿಕ್ಸ್‌ಗೆ ಗುರುವಾರ ಮತ್ತೊಂದು ಉತ್ತಮ ದಿನವಾಗಿದ್ದು, ಮಹಿಳೆಯರ 10,000 ಮೀಟರ್ ಫೈನಲ್‌ನಲ್ಲಿ ಸೀಮಾ ಕುಮಾರಿ ಮಹತ್ವದ ಕಂಚಿನ ಪದಕ ಗೆದ್ದರು.
ಸೀಮಾ 32:50.05 ಸೆಕೆಂಡ್‌ಗಳಲ್ಲಿ ಓಟ ಪೂರ್ಣಗೊಳಿಸಿ, ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 10,000 ಮೀಟರ್ ವಿಭಾಗದಲ್ಲಿ ಭಾರತ ಪದಕ ಗೆಲ್ಲಲು 16 ವರ್ಷಗಳಿಂದ ಕಾಯುತ್ತಿದ್ದ ನಿರೀಕ್ಷೆಗೆ ತೆರೆ ಎಳೆದರು. ಗುರುವಾರ ಅಥ್ಲೆಟಿಕ್ಸ್‌ನಲ್ಲಿ ದೊರೆತ ಈ ಎರಡು ಪದಕಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.