ನವದೆಹಲಿ: ಜಪಾನ್ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಮಹಿಳಾ ಹಾಕಿ ಫೈನಲ್ ಪಂದ್ಯದಲ್ಲಿ (IND vs CHI) ಹಾಲಿ ಚಾಂಪಿಯನ್ ಚೀನಾವನ್ನು 1–0 ಗೋಲುಗಳಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಂಡಿದೆ. ಅಕ್ಟೋಬರ್ 2ರಂದು ನಡೆದ ರೋಚಕ ಫೈನಲ್‌ನಲ್ಲಿ ಲಾಲ್‌ರೆಮ್ಸಿಯಾಮಿ ಬಾರಿಸಿದ ಏಕೈಕ ಗೋಲು ಭಾರತದ ಗೆಲುವಿಗೆ ಕಾರಣವಾಯಿತು. ಆ ಮೂಲಕ ಬರೋಬ್ಬರಿ 44 ವರ್ಷಗಳ ಬಳಿಕ ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ.
ಜಪಾನ್‌ನ ಐಚಿ-ನಾಗೋಯಾದ ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಪಂದ್ಯದ 10ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ಗೋಲು ದಾಖಲಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಚೀನಾ ತಂಡ ಹಲವು ಬಾರಿ ಗೋಲು ಗಳಿಸಲು ಪ್ರಯತ್ನಿಸಿದರೂ, ಭಾರತದ ಬಲಿಷ್ಠ ರಕ್ಷಣಾ ಪಡೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.
Asian Games 2026 Final: ಚಿನ್ನದ ಪದಕಕ್ಕಾಗಿ ಭಾರತ vs ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ!
10ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ನಿರ್ಣಾಯಕ ಗೋಲು
ಪಂದ್ಯದ ಆರಂಭದಿಂದಲೇ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಭಾರತದ ಆಟಗಾರ್ತಿಯರು ಆಕ್ರಮಣಕಾರಿ ಆಟದ ಮೂಲಕ ಚೀನಾದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿದರು. ಈ ಪ್ರಯತ್ನದ ಫಲವಾಗಿ ಪಂದ್ಯದ 10ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ರಿವರ್ಸ್ ಸ್ಟಿಕ್ ಮೂಲಕ ಅದ್ಭುತ ಗೋಲು ಬಾರಿಸಿದರು. ಈ ಗೋಲಿನೊಂದಿಗೆ ಭಾರತ 1–0 ಮುನ್ನಡೆ ಸಾಧಿಸಿತು. ಲಾಲ್‌ರೆಮ್ಸಿಯಾಮಿ ಅವರಿಗೆ ಇದು ವಿಶೇಷ ಪಂದ್ಯವಾಗಿತ್ತು. ತಮ್ಮ ವೃತ್ತಿಜೀವನದ 200ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅವರು ನಿರ್ಣಾಯಕ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಚೀನಾದ ದಾಳಿಗೆ ಭಾರತದ ರಕ್ಷಣಾತ್ಮಕ ಉತ್ತರ
ಗೋಲು ಬಾರಿಸಿದ ಬಳಿಕ ಭಾರತ ತಂಡ ಮುನ್ನಡೆಯನ್ನು ಕಾಯ್ದುಕೊಳ್ಳುವತ್ತ ಗಮನ ಹರಿಸಿತು. ಮತ್ತೊಂದೆಡೆ, ಹಾಲಿ ಚಾಂಪಿಯನ್ ಚೀನಾ ಸಮಬಲ ಸಾಧಿಸಲು ನಿರಂತರವಾಗಿ ದಾಳಿ ನಡೆಸಿತು. ವಿಶೇಷವಾಗಿ ಪೆನಾಲ್ಟಿ ಸ್ಟ್ರೋಕ್ ಅವಕಾಶದ ಮೂಲಕ ಚೀನಾ ಪಂದ್ಯದಲ್ಲಿ ಮರಳುವ ಪ್ರಯತ್ನ ಮಾಡಿತು.
ಆದರೆ, ಭಾರತದ ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಚೀನಾದ ಪೆನಾಲ್ಟಿ ಸ್ಟ್ರೋಕ್ ಅನ್ನು ತಡೆದು ತಂಡದ ಮುನ್ನಡೆಯನ್ನು ಉಳಿಸಿದರು. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಭಾರತದ ರಕ್ಷಣಾ ಆಟಗಾರ್ತಿಯರು ಸಂಘಟಿತ ಪ್ರದರ್ಶನ ನೀಡಿದರು. ಚೀನಾದ ಆಟಗಾರ್ತಿಯರ ಹಲವು ದಾಳಿಗಳನ್ನು ಸಮರ್ಥವಾಗಿ ತಡೆದ ಭಾರತ ಕೊನೆಯವರೆಗೂ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು.
44 ವರ್ಷಗಳ ಬಳಿಕ ಐತಿಹಾಸಿಕ ಚಿನ್ನ
ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿ 1982ರಲ್ಲಿ ಚಿನ್ನದ ಪದಕ ಗೆದ್ದಿತ್ತು. ಆ ಬಳಿಕ 1998 ಮತ್ತು 2018ರಲ್ಲಿ ಫೈನಲ್ ಪ್ರವೇಶಿಸಿದ್ದರೂ, ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತ್ತು. ಇದೀಗ 2026ರಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತ 44 ವರ್ಷಗಳ ಚಿನ್ನದ ಪದಕದ ಬರವನ್ನು ಅಂತ್ಯಗೊಳಿಸಿದೆ. ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದ ಎರಡನೇ ಚಿನ್ನದ ಪದಕವಾಗಿದೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಭಾರತ ನೇರ ಅರ್ಹತೆ
ಈ ಚಿನ್ನದ ಪದಕದೊಂದಿಗೆ ಭಾರತ ಮಹಿಳಾ ಹಾಕಿ ತಂಡ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಪಡೆದುಕೊಂಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ನೇರ ಪ್ರವೇಶ ದೊರೆಯುವುದರಿಂದ ಭಾರತದ ಪಾಲಿಗೆ ಈ ಗೆಲುವು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.