ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games 2026: ಮಲೇಷ್ಯಾವನ್ನು ಮಣಿಸಿ ಚಿನ್ನದ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡ!

2026ರ ಏಷ್ಯಾ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್‌ ಪಂದ್ಯದಲ್ಲಿ ಭಾರತ 5-1 ಅಂತರದಲ್ಲಿ ಮಲೇಷ್ಯಾವನ್ನು ಮಣಿಸಿ ಚಿನ್ನದ ಪದಕ ಗೆದ್ದಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದರೆ, ಜುಗ್ರಾಜ್ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ಶಿಲಾನಂದ್ ಲಕ್ರಾ ತಲಾ ಒಂದು ಗೋಲು ಬಾರಿಸಿದರು. ಇದಕ್ಕೂ ಮುನ್ನ ಭಾರತ ಮಹಿಳಾ ಹಾಕಿ ತಂಡ ಕೂಡ ಚಿನ್ನದ ಪದಕವನ್ನು ಗೆದ್ದಿತ್ತು.

ಭಾರತ ಪುರುಷರ ಹಾಕಿ ತಂಡಕ್ಕೆ ಚಿನ್ನದ ಪದಕ.

ನವದೆಹಲಿ: ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಪುರುಷರ ಹಾಕಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಫೈನಲ್‌ನಲ್ಲಿ (IND vs MAL) ಮಲೇಷ್ಯಾವನ್ನು 5-1 ಗೋಲುಗಳಿಂದ ಸೋಲಿಸಿದ ಭಾರತ, ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆಯಿತು. ಈ ಗೆಲುವಿನೊಂದಿಗೆ ಭಾರತ ಪುರುಷರ ಹಾಕಿ ತಂಡ, ಮೊದಲ ಬಾರಿ ಸತತ ಎರಡು ಏಷ್ಯನ್ ಗೇಮ್ಸ್ ಚಿನ್ನದ ಪದಕಗಳನ್ನು ಗೆದ್ದ ಸಾಧನೆಗೆ ಭಾಜನವಾಯಿತು. ಇದರ ಜೊತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಪಡೆದುಕೊಂಡಿದೆ.

ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಫೈನಲ್‌ನಲ್ಲಿ ಎರಡು ಗೋಲುಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ಗಳಿಂದ ಬಂದವು. ಜುಗ್ರಾಜ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಶಿಲಾನಂದ್ ಲಕ್ರಾ ತಲಾ ಒಂದೊಂದು ಗೋಲು ದಾಖಲಿಸಿದರು. ಭಾರತ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಮಲೇಷ್ಯಾ ಕೆಲವು ಹಂತಗಳಲ್ಲಿ ಪ್ರತಿರೋಧ ತೋರಿಸಿದರೂ, ಭಾರತದ ರಕ್ಷಣಾ ವಿಭಾಗ ಹಾಗೂ ಪೆನಾಲ್ಟಿ ಕಾರ್ನರ್‌ಗಳ ನಿರ್ವಹಣೆ ಎದುರಾಳಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ.

Asian Games 2026: ಚೀನಾವನ್ನು ಮಣಿಸಿ 44 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ ಮಹಿಳಾ ಹಾಕಿ ತಂಡ

ಫೈನಲ್‌ಗೆ ಮುನ್ನ ಭಾರತ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-3 ಅಂತರದಲ್ಲಿ ಮಣಿಸಿತ್ತು. ಭಾರತ ಒಂದು ಹಂತದಲ್ಲಿ 3-0 ಮುನ್ನಡೆ ಸಾಧಿಸಿದ್ದರೂ, ಪಾಕಿಸ್ತಾನ ಭರ್ಜರಿ ಕಮ್‌ಬ್ಯಾಕ್ ಮಾಡಿತ್ತು. ಅಂತಿಮವಾಗಿ ಪಂದ್ಯ ಮುಗಿಯಲು ಕೇವಲ 49 ಸೆಕೆಂಡ್‌ಗಳು ಬಾಕಿ ಇರುವಾಗ ಭಾರತ ನಿರ್ಣಾಯಕ ಗೋಲು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಮತ್ತೊಂದೆಡೆ, ಮಲೇಷ್ಯಾ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 2-1 ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಬಂದಿತ್ತು.



ಭಾರತದ ಐತಿಹಾಸಿಕ ಸಾಧನೆ

ಈ ಚಿನ್ನದ ಪದಕ ಭಾರತದ ಹಾಕಿ ತಂಡಕ್ಕೆ ಹಲವು ಕಾರಣಗಳಿಂದ ವಿಶೇಷವಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಹಿಂದಿನ ಬಾರಿ ಗೆದ್ದ ಚಿನ್ನದ ಪದಕವನ್ನು ಉಳಿಸಿಕೊಳ್ಳುವುದರ ಜೊತೆಗೆ, ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತ ಹೊಸ ಇತಿಹಾಸ ಬರೆದಿದೆ. ಇದಕ್ಕೂ ಒಂದು ದಿನ ಮೊದಲು ಭಾರತದ ಮಹಿಳಾ ಹಾಕಿ ತಂಡ, ಚಿನ್ನದ ಪದಕ ಗೆದ್ದಿತ್ತು. ಹೀಗಾಗಿ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಹಾಗೂ ಮಹಿಳೆಯರ ಹಾಕಿ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿದೆ.