ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Football: ಪಾಕಿಸ್ತಾನಕ್ಕೆ ಸೋಲುಣಿಸಿ 10ನೇ ಬಾರಿ SAFF ಚಾಂಪಿಯನ್ ಪಟ್ಟಕ್ಕೇರಿದ ಭಾರತ!

ಪಾಕಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ, 2026ರ SAFF ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ. ಆ ಮೂಲಕ ಭಾರತ ದಾಖಲೆಯ 10ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ದಕ್ಷಿಣ ಏಷ್ಯಾ ಫುಟ್ಬಾಲ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಪಾಕಿಸ್ತಾನವನ್ನು ಮಣಿಸಿ SAFF ಚಾಂಪಿಯನ್‌ಷಿಪ್‌ ಗೆದ್ದ ಭಾರತ ಫುಟ್‌ಬಾಲ್‌ ತಂಡ.

ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಭಾರತ, 2026ರ SAFF (ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್) ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಂಗಳವಾರ (ನವೆಂಬರ್ 17) ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ (IND vs PAK) ರೋಚಕ ಗೆಲುವು ದಾಖಲಿಸಿದ ಭಾರತ, ದಾಖಲೆಯ 10ನೇ ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಷ್ಟೇ ಅಲ್ಲದೆ, ಸತತ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆಗೆ ಭಾಜನವಾಗಿದೆ.

ಪಂದ್ಯದ ಮೊದಲಾರ್ಧದಲ್ಲಿ ಭಾರತಕ್ಕೆ ಪಾಕಿಸ್ತಾನ ಪ್ರಬಲ ಪೈಪೋಟಿ ನೀಡಿತು. ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದರೂ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಪಾಕಿಸ್ತಾನದ ಅಲಂಗೀರ್ ಘಾಜಿ (45+1ನೇ ನಿಮಿಷ) ಗೋಲು ದಾಖಲಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಹೀಗಾಗಿ ವಿರಾಮದ ವೇಳೆಗೆ ಭಾರತ ಹಿನ್ನಡೆ ಅನುಭವಿಸಿತ್ತು.

ದ್ವಿತೀಯಾರ್ಧದಲ್ಲಿ ಭಾರತ ತಿರುಗೇಟು ನೀಡಲು ಪ್ರಯತ್ನಿಸಿತು. ಇದರ ನಡುವೆ 59ನೇ ನಿಮಿಷದಲ್ಲಿ ಭಾರತದ ಬ್ರಿಸನ್ ಫರ್ನಾಂಡಿಸ್ ವಿರುದ್ಧ ಅಪಾಯಕಾರಿ ಟ್ಯಾಕಲ್ ಮಾಡಿದ ಪಾಕಿಸ್ತಾನದ ಜುನೈದ್ ಶಾ ಅವರಿಗೆ VAR ಪರಿಶೀಲನೆಯ ಬಳಿಕ ನೇರವಾಗಿ ಕೆಂಪು ಕಾರ್ಡ್ ನೀಡಲಾಯಿತು. ಪರಿಣಾಮ ಪಾಕಿಸ್ತಾನ 10 ಆಟಗಾರರೊಂದಿಗೆ ಆಡಬೇಕಾದ ಪರಿಸ್ಥಿತಿ ಎದುರಾಯಿತು.

IPL 2027: ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ವಿವರ!

ಇದರ ಲಾಭ ಪಡೆದ ಭಾರತ ಕೇವಲ ಒಂದು ನಿಮಿಷದ ಅಂತರದಲ್ಲಿ ಸಮಬಲ ಸಾಧಿಸಿತು. 60ನೇ ನಿಮಿಷದಲ್ಲಿ ಸುಹೈಲ್ ಅಹ್ಮದ್ ಭಟ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಭಾರತಕ್ಕೆ 1-1ರ ಸಮಬಲ ತಂದುಕೊಟ್ಟರು. ನಂತರ ಭಾರತ ಗೆಲುವಿನ ಗೋಲಿಗಾಗಿ ನಿರಂತರ ಪ್ರಯತ್ನ ನಡೆಸಿತು.

ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಭಾರತಕ್ಕೆ ನಿರ್ಣಾಯಕ ಗೋಲು ಲಭಿಸಿತು. 88ನೇ ನಿಮಿಷದಲ್ಲಿ ಕಾರ್ನರ್ ಕಿಕ್ ಮೂಲಕ ಬಂದ ಚೆಂಡನ್ನು ಅದ್ಭುತವಾಗಿ ಹೆಡರ್ ಮಾಡಿದ ಸಂದೀಪ್ ಮಂಡಿ ಗೋಲು ದಾಖಲಿಸಿದರು. ಈ ಮೂಲಕ ಭಾರತ 2-1 ಮುನ್ನಡೆ ಸಾಧಿಸಿತು. ಅಂತಿಮವಾಗಿ ಇದೇ ಮುನ್ನಡೆಯನ್ನು ಕಾಯ್ದುಕೊಂಡ ಭಾರತ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.



ಭಾರತದ ದಾಖಲೆಯ 10ನೇ ಪ್ರಶಸ್ತಿ

SAFF ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಈ ಹಿಂದೆ 1993, 1997, 1999, 2005, 2009, 2011, 2015, 2021 ಮತ್ತು 2023ರಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ಇದೀಗ 2026ರಲ್ಲೂ ಚಾಂಪಿಯನ್ ಆಗಿದೆ. ಒಟ್ಟು 15 ಆವೃತ್ತಿಗಳಲ್ಲಿ 10 ಬಾರಿ ಪ್ರಶಸ್ತಿ ಗೆದ್ದಿರುವುದು ಭಾರತದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಇನ್ನೊಂದೆಡೆ, ಪಾಕಿಸ್ತಾನ ತಂಡ ಇದೇ ಮೊದಲ ಬಾರಿಗೆ SAFF ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿತ್ತು. ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಸೋಲು ನಿರಾಸೆ ಮೂಡಿಸಿದೆ.