ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ISL 2026: ಬೆಂಗಳೂರು ಎಫ್‌ಸಿ vs ಪಂಜಾಬ್ ಎಫ್‌ಸಿ ಪಂದ್ಯಕ್ಕೆ ಕಂಠೀರವದಲ್ಲಿ ರೋಚಕ ಹಣಾಹಣಿ!

ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರವರಿ 27 ರಂದು ಬೆಂಗಳೂರು ಎಫ್‌ಸಿ ಹಾಗೂ ಪಂಜಾಬ್‌ ಎಫ್‌ಸಿ ನಡುವೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಬಿಎಫ್‌ಸಿ, ಮುಂದಿನ ಪಂದ್ಯವನ್ನು ಗೆಲ್ಲಲು ಬಯಸುತ್ತಿದೆ.

ಪಂಜಾಬ್‌ ಎಫ್‌ಸಿ ವಿರುದ್ಧದ ಪಂದ್ಯಕ್ಕೆ ಬಿಎಫ್‌ಸಿ ಸಜ್ಜು.

ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಫೆಬ್ರವರಿ 27 ರಂದು ಬೆಂಗಳೂರು ಎಫ್‌ಸಿ (BFC) ಮತ್ತು ಪಂಜಾಬ್ ಎಫ್‌ಸಿ (PFC) ತಂಡಗಳ ನಡುವೆ 2026ರ ಇಂಡಿಯನ್‌ ಸೂಪರ್‌ ಲೀಗ್‌ (ISL 2026) ಟೂರ್ನಿಯ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಪಂಜಾಬ್ ಎಫ್‌ಸಿ ತಂಡವು ಸತತ ಎರಡನೇ ಹೊರಗಿನ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧದ 1-0 ಸೋಲಿನ ಬಳಿಕ ಚೇತರಿಸಿಕೊಳ್ಳುವ ಗುರಿ ಹೊಂದಿದೆ.

ಮತ್ತೊಂದೆಡೆ, ಬೆಂಗಳೂರು ಎಫ್‌ಸಿ ಈ ಸೀಸನ್‌ನ ತನ್ನ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯ 1-1 ಸಮಬಲದಲ್ಲಿ ಅಂತ್ಯಗೊಂಡ ನಂತರ, ಸುನಿಲ್ ಚೆಟ್ರಿ ಸಾರಥ್ಯದ ತಂಡವು ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದೆ. ಎರಡೂ ತಂಡಗಳು ಪೂರ್ಣ 3 ಅಂಕಗಳಿಗಾಗಿ ಹೋರಾಡಲಿರುವುದರಿಂದ ಮೈದಾನದಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಎರಡೂ ಕ್ಲಬ್‌ಗಳು ಹೊಸ ಆಟಗಾರರನ್ನು ಸೇರಿಸಿಕೊಂಡಿರುವುದು ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ. ಬೆಂಗಳೂರು ಎಫ್‌ಸಿ ತಂಡ ಮಿಡ್‌ ಫೀಲ್ಡ್‌ನಲ್ಲಿ ಬ್ರಾಯನ್ ಸಾಂಚೆಝ್ ಅವರ ದೃಷ್ಟಿ (Vision) ಮತ್ತು ಆಟದ ಸೃಜನಶೀಲತೆ ತಂಡಕ್ಕೆ ಬಲ ತುಂಬಿದೆ. ವಿಂಗರ್ ಅಶಿಕ್ ಕುರುಣಿಯಾನ್ ಅವರ ವೇಗವು ಎದುರಾಳಿ ರಕ್ಷಣಾ ಪಡೆಯನ್ನು ಮಣಿಸಲು ಪ್ರಮುಖ ಅಸ್ತ್ರವಾಗಿದೆ. ಹಾಗೆಯೇ ಸಿರೋಜಿದ್ದಿನ್ ಕುಝಿಯೇವ್ ಅವರ ತಾಂತ್ರಿಕ ಕೌಶಲವು ತಂಡಕ್ಕೆ ಹೊಸ ಚೈತನ್ಯ ನೀಡಲಿದೆ.

T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!

ಪಂಜಾಬ್ ಎಫ್‌ಸಿ ತಂಡವು ಮಿಡ್‌ಫೀಲ್ಡ್‌ನಲ್ಲಿ ಡ್ಯಾನಿ ರಾಮಿರೆಜ್ ಆಟದ ವೇಗವನ್ನು ನಿಯಂತ್ರಿಸಿದರೆ, ಮುಂಚೂಣಿಯಲ್ಲಿ ದೈಹಿಕವಾಗಿ ಬಲಿಷ್ಠವಾಗಿರುವ ಎಫಿಯಾಂಗ್ ನುಂಗುಸಿ ಗೋಲು ಗಳಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಕ್ಷಣಾ ವಿಭಾಗದಲ್ಲಿ ಬ್ರೆಜಿಲ್‌ನ ಅನುಭವಿ ಆಟಗಾರ ಪಾಬ್ಲೊ ಸ್ಯಾಂಟೋಸ್ ಅವರ ನಾಯಕತ್ವವು ಬೆಂಗಳೂರಿನ ಆಕ್ರಮಣವನ್ನು ತಡೆಯಲು ನಿರ್ಣಾಯಕವಾಗಲಿದೆ.

ಬೆಂಗಳೂರು ತಂಡದ ಫನಾಯ್ ಮಾತನಾಡಿ 'ನಾನು ಈ ಸ್ಥಾನದಲ್ಲಿ ಆಡಲು ಇಷ್ಟಪಡುತ್ತೇನೆ. ರಕ್ಷಣಾ ಮತ್ತು ದಾಳಿಯ ನಡುವೆ ಸಂಪರ್ಕ ಸಾಧಿಸಿ, ಆಟದ ವೇಗವನ್ನು ನಿಯಂತ್ರಿಸುವುದು ನನ್ನ ಪಾತ್ರದ ಮುಖ್ಯ ಭಾಗ' ಎಂದರು.

IND vs ZIM: ʻಶಿವಂ ದುಬೆ ಆಲ್‌ರೌಂಡರ್‌ ಅಲ್ಲ, ಬ್ಯಾಟ್ಸ್‌ಮನ್‌ʼ-ಮೊಹಮ್ಮದ್‌ ಕೈಫ್‌ ಅಚ್ಚರಿ ಹೇಳಿಕೆ!

ಮುಖ್ಯ ಕೋಚ್ ರೆನೆಡಿ ಸಿಂಗ್ ತಂಡದ ಮನೋಭಾವದ ಬಗ್ಗೆ ಮಾತನಾಡುತ್ತಾ, "ಎದುರಾಳಿ ಯಾವ ತಂಡವಾಗಿರಲಿ, ಮೈದಾನದಲ್ಲಿ ಸಂಪೂರ್ಣ ಹೋರಾಟ ನೀಡುವುದು ಮುಖ್ಯ. ಕಾಗದದ ಮೇಲೆ ತಂಡ ಹೇಗಿದೆ ಎಂಬುದು ನನಗೆ ಮುಖ್ಯವಲ್ಲ. ನನ್ನ ಆಟಗಾರರು ಪ್ರತಿ ಪಂದ್ಯವನ್ನು ಕೊನೆಯ ಪಂದ್ಯದಂತೆ ಭಾವಿಸಿ, ಪ್ರತಿ ಬಾಲ್‌ಗಾಗಿ ರಕ್ಷಣೆ ಮತ್ತು ದಾಳಿಯಲ್ಲಿ ಹೋರಾಡಬೇಕು," ಎಂದು ತಿಳಿಸಿದರು.

ಎರಡು ತಂಡಗಳು ಲೀಗ್ ಪಟ್ಟಿಯಲ್ಲಿ ಮೇಲೇರಲು ಬಯಸುತ್ತಿರುವ ಹಿನ್ನೆಲೆಯಲ್ಲಿ, ಈ ಶುಕ್ರವಾರ ಕಂಠೀರವದಲ್ಲಿ ನಡೆಯುವ ಪಂದ್ಯ ರೋಚಕವಾಗಿರಲಿದೆ.