ನವದೆಹಲಿ: ಹತ್ತೊಂಬತ್ತು ವರ್ಷಗಳ ಹಿಂದೆ 2007ರಲ್ಲಿ ಪುಟಾಣಿ ಲಮೀನ್ ಯಮಾಲ್ (Lamine Yamal) ಅವರನ್ನು ಸ್ನಾನ ಮಾಡಿಸುತ್ತಿರುವ ವೈರಲ್ ಫೋಟೋ ಕುರಿತು ಅರ್ಜೆಂಟೀನಾ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Lionel Messi) ಪ್ರತಿಕ್ರಿಯೆ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿರುವ ಬಗ್ಗೆ "ಅಚ್ಚರಿಯ ಸಂಗತಿ" ಎಂದು ಅವರು ಬಣ್ಣಿಸಿದ್ದಾರೆ. ಫಿಫಾ ವಿಶ್ವಕಪ್ ಫೈನಲ್‌ನಲ್ಲಿ (FIFA World Cup 2026) ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸ್ಪೇನ್ ವಿರುದ್ಧ ಕಾದಾಟ ನಡೆಸುವ ವೇಳೆ ಮೆಸ್ಸಿ ಮತ್ತು ಯಮಾಲ್ ಮುಖಾಮುಖಿಯಾಗಲಿದ್ದಾರೆ.
ಈ ಐತಿಹಾಸಿಕ ಫೋಟೋವನ್ನು ಬಾರ್ಸಿಲೋನಾ ಕ್ರೀಡಾಂಗಣದಲ್ಲಿ ಸ್ಥಳೀಯ ಪತ್ರಿಕೆಯಾದ ಸ್ಪೋರ್ಟ್ ಹಾಗೂ ಯುನಿಸೆಫ್ ಆಯೋಜಿಸಿದ್ದ ಚಾರಿಟಿ ಕ್ಯಾಲೆಂಡರ್‌ಗಾಗಿ ತೆಗೆದುಕೊಳ್ಳಲಾಗಿತ್ತು. ವೈರಲ್ ಆಗಿರುವ ಚಿತ್ರದಲ್ಲಿ ಆಗ 20 ವರ್ಷದ ಮೆಸ್ಸಿ, ಆರು ತಿಂಗಳ ಮಗುವಾಗಿದ್ದ ಲಮೀನ್ ಯಮಾಲ್ ಅವರನ್ನು ಪ್ಲಾಸ್ಟಿಕ್ ಸ್ನಾನದ ತೊಟ್ಟಿಯಲ್ಲಿ ಹಿಡಿದಿರುವುದು ಕಾಣಿಸುತ್ತದೆ. ಈ ಚಿತ್ರವನ್ನು ಫ್ರೀಲ್ಯಾನ್ಸ್ ಛಾಯಾಗ್ರಾಹಕ ಜೋನ್ ಮೊನ್‌ಫೋರ್ಟ್ ಸೆರೆಹಿಡಿದಿದ್ದರು.
FIFA World Cup Final: ಲಿಯೋನೆಲ್ ಮೆಸ್ಸಿ ಮುರಿಯಬಹುದಾದ ಟಾಪ್ 5 ದಾಖಲೆಗಳು!
"ಲಮೀನ್ ಜೊತೆಗಿನ ಆ ಚಿತ್ರ... ಈಗ ನಾವು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದೇವೆ. ಆ ಫೋಟೋ ತೆಗೆದಾಗ ಅವರು ಇನ್ನೂ ಮಗು. ಇದು ನಿಜಕ್ಕೂ ನಂಬಲಸಾಧ್ಯವಾದ ಸಂಗತಿ," ಎಂದು ಟಾಮ್ ಬ್ರಾಡಿ ಅವರೊಂದಿಗೆ ಶುಕ್ರವಾರ ನಡೆದ ಸಂವಾದದಲ್ಲಿ ಹೇಳಿದ ಮೆಸ್ಸಿ, "ಅವರು (ಯಮಾಲ್) ಈಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ," ಎಂದು ಶ್ಲಾಘಿಸಿದ್ದಾರೆ.
ಲಮೀನ್ ಯಮಾಲ್‌ಗೆ ಮೆಸ್ಸಿ ಮೆಚ್ಚುಗೆ
ಲಮೀನ್ ಯಮಾಲ್ ಬಗ್ಗೆ ಮಾತನಾಡಿದ ಮೆಸ್ಸಿ, ಬಾರ್ಸಿಲೋನಾ ಪರ ಆಡುತ್ತಿರುವ ಕಾರಣದಿಂದ ಅವರನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಕೇವಲ 19ನೇ ವಯಸ್ಸಿನಲ್ಲೇ ಯಮಾಲ್ ಜಾಗತಿಕ ಫುಟ್‌ಬಾಲ್ ಐಕಾನ್ ಆಗಿದ್ದಾರೆ ಎಂದು ಅವರು ಗುಣಗಾಣ ಮಾಡಿದ್ದಾರೆ. ಭಾನುವಾರ ನಡೆಯುವ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸುವ ಅವಕಾಶ ಅವರ ಮುಂದಿದೆ ಎಂದಿದ್ದಾರೆ. ಆದರೆ ತಮ್ಮ ಮೊದಲ ವಿಶ್ವಕಪ್ ಗೆಲುವಿಗಾಗಿ ಯಮಾಲ್ ಇನ್ನೂ ಸ್ವಲ್ಪ ಸಮಯ ಕಾಯುವಂತೆ ಮಾಡಲು ಅರ್ಜೆಂಟಿನಾ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ಲಮೀನ್ ಯಮಾಲ್: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್ ಜಗತ್ತಿನ ತಾರೆ!
"ಲಮೀನ್ ಅತ್ಯಂತ ಅದ್ಭುತ ಆಟಗಾರ. ನಾನು ಅವರನ್ನು ಹತ್ತಿರದಿಂದ ಗಮನಿಸಿದ್ದೇನೆ, ಏಕೆಂದರೆ ಅವರು ನಾನು ಪ್ರೀತಿಸುವ ಮತ್ತು ಯಾವಾಗಲೂ ಯಶಸ್ಸು ಬಯಸುವ ಕ್ಲಬ್‌ಗಾಗಿ (ಬಾರ್ಸಿಲೋನಾ) ಆಡುತ್ತಿದ್ದಾರೆ. ಕೇವಲ 19ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದ ಐಕಾನ್ ಆಗಿದ್ದಾರೆ. ಅವರ ಮುಂದೆ ಇನ್ನೂ ಸಂಪೂರ್ಣ ವೃತ್ತಿಜೀವನವಿದೆ. ಇತಿಹಾಸ ನಿರ್ಮಿಸಲು ಅವರಿಗೆ ಉತ್ತಮ ಅವಕಾಶವಿದೆ. ಆದರೆ ಅದು ಈ ಬಾರಿ ಆಗದಂತೆ ಮಾಡಲು ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಅವರಿಗೆ ನನ್ನ ಶುಭಾಶಯಗಳು. ನಿಜ ಹೇಳಬೇಕೆಂದರೆ, ಆ ಫೋಟೋ ತುಂಬಾ ವಿಶೇಷವಾಗಿದೆ, ಏಕೆಂದರೆ ಅದು ಜೀವನದ ಒಂದು ಅದ್ಭುತ ಕ್ಷಣವನ್ನು ತೋರಿಸುತ್ತದೆ," ಎಂದು ಮೆಸ್ಸಿ ಹೇಳಿದ್ದಾರೆ.
"ಅವರಿಗೆ (ಯಮಾಲ್) ಶುಭವಾಗಲಿ ಎಂದು ಹಾರೈಸುತ್ತೇನೆ. ಏಕೆಂದರೆ ಅವರಿಗೆ ಒಳ್ಳೆಯದಾಗುವುದು ಬಾರ್ಸಿಲೋನಾಗೂ ಒಳ್ಳೆಯದೇ. ಆದರೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿ, ಅವರ ಅತ್ಯುತ್ತಮ ಆಟ ಹೊರಬರದಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಅದು ಕಷ್ಟದ ಕೆಲಸ ಎಂಬುದು ಗೊತ್ತಿದೆ. ಅವರು ಹಾಗೂ ಸ್ಪೇನ್ ತಂಡ ಉತ್ತಮ ಆಟಗಾರರನ್ನು ಹೊಂದಿದ್ದು, ಅದ್ಭುತ ಶೈಲಿಯ ಫುಟ್‌ಬಾಲ್ ಆಡುತ್ತಾರೆ. ನಮ್ಮಲ್ಲೂ ನಮ್ಮದೇ ಆದ ಸಾಮರ್ಥ್ಯವುಳ್ಳ ಆಟಗಾರರು ಇದ್ದಾರೆ," ಎಂದು ಲಿಯೋನೆಲ್ ಮೆಸ್ಸಿ ತಿಳಿಸಿದ್ದಾರೆ.