ನವದೆಹಲಿ: ಭಾನುವಾರ ನಡೆಯಲಿರುವ 2026ರ ಫಿಫಾ ವಿಶ್ವಕಪ್ ಫೈನಲ್ (FIFA World Cup 2026) ಪಂದ್ಯದಲ್ಲಿ ಸ್ಪೇನ್ (Spain) ವಿರುದ್ಧ ಕಣಕ್ಕಿಳಿಯಲಿರುವ ಅರ್ಜೆಂಟೀನಾ (Argentina), ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದೆ. ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಿಂದ 12,000 ಕಿ.ಮೀ ಗೂ ಹೆಚ್ಚು ದೂರದಲ್ಲಿರುವ ಕೋಲ್ಕತಾ ಸೇರಿದಂತೆ ಭಾರತದ ಕೋಟ್ಯಂತರ ಅಭಿಮಾನಿಗಳು ಮಧ್ಯರಾತ್ರಿಯಲ್ಲಿ ಈ ಮಹಾ ಫೈನಲ್ ವೀಕ್ಷಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಅರ್ಜೆಂಟೀನಾಗೆ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಅಪಾರ ಅಭಿಮಾನಿ ಬಳಗವಿದೆ. ಆದರೆ ಆಶ್ಚರ್ಯಕರವೇನೆಂದರೆ, ಲ್ಯಾಟಿನ್ ಅಮೆರಿಕಾದಲ್ಲಿ ಮಾತ್ರ ಅದೇ ಮಟ್ಟದ ಬೆಂಬಲ ಈ ತಂಡಕ್ಕೆ ದೊರೆಯುತ್ತಿಲ್ಲ. ಸಾಮಾನ್ಯವಾಗಿ ಈ ಪ್ರದೇಶದ ದೇಶಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ದಕ್ಷಿಣ ಅಮೆರಿಕಾದ ತಂಡಗಳಿಗೆ ಬೆಂಬಲ ನೀಡುತ್ತವೆ.
ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ದಾಖಲೆಯ ನಾಲ್ಕನೇ ವಿಶ್ವಕಪ್ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಸಂದರ್ಭದಲ್ಲಿ, ಬ್ರೆಜಿಲ್, ಮೆಕ್ಸಿಕೊ, ಕೊಲಂಬಿಯಾ ಹಾಗೂ ಚಿಲಿ ಸೇರಿದಂತೆ ಹಲವು ಲ್ಯಾಟಿನ್ ಅಮೆರಿಕನ್ ದೇಶಗಳ ಸಾಮಾಜಿಕ ಜಾಲತಾಣಗಳಲ್ಲಿ ಅರ್ಜೆಂಟೀನಾಗೆ ಬದಲಾಗಿ ಸ್ಪೇನ್‌ಗೆ ಬೆಂಬಲ ವ್ಯಕ್ತಪಡಿಸುವ ಮೀಮ್ಸ್, ಹಾಸ್ಯ ಪೋಸ್ಟ್‌ಗಳು ಮತ್ತು ಸಂದೇಶಗಳು ವೈರಲ್ ಆಗುತ್ತಿವೆ.
ಅರ್ಜೆಂಟೀನಾ ಗೆಲುವಿಗಾಗಿ ಅಧ್ಯಕ್ಷರ ವಿಚಿತ್ರ ನಂಬಿಕೆ ವೈರಲ್
ಅರ್ಜೆಂಟೀನಾ ಸೋಲಬೇಕೆಂದು ಲ್ಯಾಟಿನ್ ಅಮೆರಿಕ ಏಕೆ ಬಯಸುತ್ತಿದೆ?
ಫುಟ್‌ಬಾಲ್ ಇತಿಹಾಸದಲ್ಲಿ ಐದು ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಬ್ರೆಜಿಲ್ ಅತ್ಯಂತ ಯಶಸ್ವಿ ತಂಡವಾಗಿದೆ. ಅರ್ಜೆಂಟೀನಾ ಮತ್ತು ಬ್ರೆಜಿಲ್ ನಡುವಿನ ಸಾಂಪ್ರದಾಯಿಕ ಪೈಪೋಟಿ ತೀವ್ರವಾಗಿರುವುದರಿಂದ, ಅರ್ಜೆಂಟೀನಾ ಸೋಲಬೇಕು ಎಂದು ಬ್ರೆಜಿಲ್ ಅಭಿಮಾನಿಗಳು ಬಯಸುವುದು ಸಹಜ. ಇದರಿಂದ ವಿಶ್ವಕಪ್ ಪ್ರಶಸ್ತಿಗಳ ಸಂಖ್ಯೆಯಲ್ಲಿ ತಮ್ಮ ಮೇಲುಗೈ ಮುಂದುವರಿಯುತ್ತದೆ ಎಂಬ ಭಾವನೆ ಅವರಲ್ಲಿದೆ.
ಆದರೆ, ಅರ್ಜೆಂಟೀನಾ ವಿರುದ್ಧ ಲ್ಯಾಟಿನ್ ಅಮೆರಿಕಾದ ಕೆಲ ದೇಶಗಳಲ್ಲಿ ಕಂಡುಬರುತ್ತಿರುವ ನಕಾರಾತ್ಮಕ ಮನೋಭಾವಕ್ಕೆ ಕೇವಲ ಈ ಐತಿಹಾಸಿಕ ಪೈಪೋಟಿಯೇ ಕಾರಣವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊಲಂಬಿಯಾದ ಸಮಾಜಶಾಸ್ತ್ರಜ್ಞ ಜರ್ಮನ್ ಗೊಮೆಜ್ ಅವರು ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ, ಈ ಪ್ರದೇಶದಲ್ಲಿ ಹಿಂದೆ ಇದ್ದ ಪ್ರಾದೇಶಿಕ ಐಕ್ಯತೆಯ ಭಾವನೆ ಈಗ ದುರ್ಬಲವಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ‘ಫಿಫಾ ಅರ್ಜೆಂಟೀನಾಗೆ ವಿಶೇಷ ಅನುಕೂಲ ಮಾಡಿಕೊಡುತ್ತಿದೆ’ ಎಂಬ ವಾದ ಹೆಚ್ಚು ಹರಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬುಕಾಯೊ ಸಕ ಹ್ಯಾಟ್ರಿಕ್ ಗೋಲು; ಫ್ರಾನ್ಸ್ ಮಣಿಸಿ ಕಂಚಿನ ಪದಕ ಗೆದ್ದ ಇಂಗ್ಲೆಂಡ್
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿಯೂ ಫಿಫಾ ಅರ್ಜೆಂಟೀನಾ ಪರ ಪಕ್ಷಪಾತ ತೋರಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲವು ಪ್ರಮುಖ ತೀರ್ಪುಗಳು ಹಾಲಿ ಚಾಂಪಿಯನ್ ಅರ್ಜೆಂಟೀನಾದ ಪರವಾಗಿ ಹೋಗಿರುವುದರಿಂದ ಈ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.
ಬ್ರೆಜಿಲ್‌ನ ಅಭಿಮಾನಿ ಫ್ರಾನ್ಸಿಸ್ಕೊ ಸ್ಯಾಂಟೋಸ್ ಅವರ ಮಾತುಗಳು ಈ ಮನೋಭಾವವನ್ನು ಪ್ರತಿಬಿಂಬಿಸುತ್ತವೆ. "ಅರ್ಜೆಂಟೀನಾಗೆ ತೀರ್ಪುಗಾರರಿಂದ ನೆರವು ಸಿಕ್ಕಿದೆ," ಎಂದು ಅವರು ಎಎಫ್‌ಪಿಗೆ ತಿಳಿಸಿದ್ದಾರೆ.
"ಬ್ರೆಜಿಲ್ ಆರನೇ ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದಿದ್ದರೆ, ಅರ್ಜೆಂಟೀನಾ ನಾಲ್ಕನೇ ಬಾರಿ ಚಾಂಪಿಯನ್ ಆಗುವುದಕ್ಕಿಂತ ಸ್ಪೇನ್ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವುದನ್ನೇ ನಾನು ಬಯಸುತ್ತೇನೆ," ಎಂದು ಅವರು ಹೇಳಿದ್ದಾರೆ.
FIFA World Cup 2026| ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸ್ಪೇನ್ ಸವಾಲ್; ವಿಶ್ವಕಪ್ ಕಿರೀಟಕ್ಕಾಗಿ ಮಹಾ ಕದನ!
ಇದೇ ರೀತಿಯ ಅಭಿಪ್ರಾಯಗಳು ಲ್ಯಾಟಿನ್ ಅಮೆರಿಕಾದ ಹಲವು ದೇಶಗಳಲ್ಲಿಯೂ ವ್ಯಕ್ತವಾಗುತ್ತಿವೆ. ಕೊಲಂಬಿಯಾದ ಹಣಕಾಸು ಕ್ಷೇತ್ರದ ಉದ್ಯೋಗಿ ಜುವಾನ್ ಕ್ಯಾಮಿಲೊ ಅಬುಸೈದ್, "ನಾವು ಸ್ಪೇನ್‌ಗೆ ಬೆಂಬಲ ನೀಡುತ್ತೇವೆ," ಎಂದು ಎಎಫ್‌ಪಿಗೆ ತಿಳಿಸಿದ್ದಾರೆ.
ಇತ್ತ ಮೆಕ್ಸಿಕೋದ ಪೊಲೀಸ್ ಅಧಿಕಾರಿ ಆಂಟೋನಿಯೊ ಲೋಪೆಜ್, ಲಿಯೋನೆಲ್ ಮೆಸ್ಸಿಯ ಅಭಿಮಾನಿಯಾಗಿದ್ದರೂ, ಅರ್ಜೆಂಟೀನಾ ಪರ ತೀರ್ಪುಗಾರರು ನಿಂತಿದ್ದಾರೆ ಎನ್ನಲಾದ ಅನುಕೂಲಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಎರಡು ಬಾರಿ ಚಾಂಪಿಯನ್ ಆಗಲು ಮೈದಾನದಲ್ಲಿ ಬೆವರು ಸುರಿದು, ಕಠಿಣ ಪರಿಶ್ರಮ ಪಟ್ಟರೆ ಅದನ್ನು ನಾನು ಒಪ್ಪುತ್ತೇನೆ. ಆದರೆ ತೀರ್ಪುಗಾರರ ಸಹಾಯದಿಂದ ಪ್ರಶಸ್ತಿ ಗೆದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ.
ಫಿಫಾ ವಿಶ್ವಕಪ್ ಫೈನಲ್ ವಿವರ
ಅರ್ಜೆಂಟೀನಾ vs ಸ್ಪೇನ್
ದಿನಾಂಕ: ಜುಲೈ 20, 2026
ಸಮಯ: ಮಧ್ಯ ರಾತ್ರಿ 12:30ಕ್ಕೆ ಆರಂಭ (ಭಾರತೀಯ ಕಾಲಮಾನ)
ಸ್ಥಳ: ಮೆಡ್‌ಲೈಫ್ ಸ್ಟೇಡಿಯಂ, ನ್ಯೂ ಜೆರ್ಸಿ
ನೇರ ಪ್ರಸಾರ: ಯುನೈಟ್18, ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ZEE5 ಆಪ್, ವೆಬ್‌ಸೈಟ್