ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದ ಮನೀಷಾ ಭಾನ್ವಾಲಾ!

ಭಾರತದ ಮನೀಷಾ ಭಾನ್ವಾಲಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಮಹತ್ವದ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ. ಇವರ ಮಹಿಳೆಯರ 59 ಕೆಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಅಮೆರಿಕಾದ ಎಲಿಝೆಬೆಥ್‌ ನೆಟ್ಟೆ ಅವರನ್ನು ಮಣಿಸಿ ಚಾಂಪಿಯನ್‌ ಆಗಿದ್ದಾರೆ.

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮನೀಷಾ ಭಾನ್ವಾಲಾ.

ನವದೆಹಲಿ: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ (restling World Championships) ಟೂರ್ನಿಯಲ್ಲಿ ಭಾರತದ ಮಹಿಳಾ ಕುಸ್ತಿಪಟು ಮನೀಷಾ ಭಾನ್ವಾಲಾ (Manisha Bhanwala) ಅವರು ಚಿನ್ನದ ಪದಕ ಗೆದ್ದು ನೂತನ ಮೈಲುಗಲ್ಲು ತಲುಪಿದ್ದಾರೆ. ಶುಕ್ರವಾರ ಮಹಿಳೆಯರ 59 ಕೆಜಿ ವಿಭಾಗ ಫೈನಲ್‌ ಹಣಾಹಣಿಯಲ್ಲಿ ಅಮೆರಿಕಾದ ಎಲಿಝಿಬೆಥ್‌ ನೆಟ್ಟೆ ಅವರನ್ನು 8-6 ಅಂತರದಲ್ಲಿ ಮಣಿಸಿ ಚಾಂಪಿಯನ್‌ ಆದರು. ಆ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ದಾಖಲೆಯನ್ನು ಬರೆದರು.

ಚಿನ್ನದ ಪದಕಕ್ಕಾಗಿ ನಡೆದ ಫೈನಲ್ ಪಂದ್ಯದಲ್ಲಿ 29ರ ವಯಸ್ಸಿನ ಮನೀಷಾ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಪ್ರಶಸ್ತಿಯನ್ನು ಗೆದ್ದುಕೊಂಡರು. ಮೊದಲ ಅವಧಿಯ ಅಂತ್ಯಕ್ಕೆ ನಾಲ್ಕು ಅಂಕಗಳ ಹಿನ್ನಡೆ ಅನುಭವಿಸಿದ್ದ ಅವರು, ಎದುರಾಳಿ ಆಟಗಾರ್ತಿಯ ವಿರುದ್ಧ ಅಂತಿಮವಾಗಿ ಮೇಲುಗೈ ಸಾಧಿಸಿದರು. ಪ್ಯಾನ್ ಅಮೆರಿಕನ್ ಚಾಂಪಿಯನ್ ನೆಟ್ಟೆ ಆರಂಭದಲ್ಲಿ 5-1 ಅಂಕಗಳ ಮುನ್ನಡೆ ಸಾಧಿಸಿದ್ದರು. ಆದರೆ, ಮನೀಷಾ ಸತತ ಆಕ್ರಮಣಕಾರಿ ಆಟದ ಮೂಲಕ ಅಂತರವನ್ನು ಕಡಿಮೆ ಮಾಡಿ, ಅಂತಿಮವಾಗಿ ಗೆಲುವು ದಾಖಲಿಸಿದರು. ಈ ಮೂಲಕ ತಮ್ಮ ವೃತ್ತಿಜೀವನದ ಮಹತ್ವದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

24 ಗೆಲುವು, 7 ಪ್ರಶಸ್ತಿ, ಒಂದು ನೋವಿನ ಸೋಲು: ಕುಸ್ತಿಪಟು ಸುಜೀತ್ ಗೆಲುವಿನ ಓಟಕ್ಕೆ ಬ್ರೇಕ್‌

59 ಕೆ.ಜಿ ವಿಭಾಗ, ಒಲಿಂಪಿಕ್ಸ್ ಕ್ರೀಡಾಕೂಟದ ಸ್ಪರ್ಧಾ ವಿಭಾಗಗಳಲ್ಲಿ ಇಲ್ಲದಿದ್ದರೂ, ಮನೀಷಾ ಅವರ ಈ ಗೆಲುವು ಭಾರತೀಯ ಮಹಿಳಾ ಕುಸ್ತಿಗೆ ಐತಿಹಾಸಿಕ ಸಾಧನೆಯಾಗಿದೆ. ಈ ಸಾಧನೆಗೂ ಮೊದಲು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ ಏಕೈಕ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆ ಅಂಶು ಮಲಿಕ್ ಅವರ ಹೆಸರಿನಲ್ಲಿತ್ತು. ಅವರು 2021ರಲ್ಲಿ 57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಚಿನ್ನದ ಪದಕದ ಹಾದಿಯಲ್ಲಿ ಮನೀಷಾ ಸಾಧನೆ

ಮನೀಷಾ ಅವರ ಚಾಂಪಿಯನ್‌ಶಿಪ್ ಪಯಣವೂ ಅತ್ಯಂತ ಪ್ರಭಾವಶಾಲಿಯಾಗಿತ್ತು. ಮೊದಲಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಲಾರೆನ್ಸ್ ಬ್ಯೂರೆಗಾರ್ಡ್ ಅವರನ್ನು ಸೋಲಿಸಿದರು. ಬಳಿಕ ಎದುರಾಳಿಯನ್ನು ಪಿನ್ ಮಾಡುವ ಮೂಲಕ ಗೆಲುವು ಸಾಧಿಸಿದರು. ನಂತರ ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ಅವರನ್ನು ಮಣಿಸಿದರು. ಆ ಬಳಿಕ ಕಜಕಿಸ್ತಾನದ ಅಲ್ಟಿನ್ ಶಗಾಯೇವಾ ಅವರನ್ನು ಪಿನ್ ಮಾಡುವ ಮೂಲಕ ಫೈನಲ್‌ಗೆ ಪ್ರವೇಶಿಸಿದರು.

ಇದೇ ವೇಳೆ ಭಾರತದ ಪಾಲಿಗೆ ಮತ್ತೆರಡು ಪದಕಗಳು ಲಭಿಸಿದವು. 50 ಕೆ.ಜಿ ವಿಭಾಗದಲ್ಲಿ ನೀಲಂ ಸಿರೋಹಿ ಫೈನಲ್ ತಲುಪಿದರೆ, 76 ಕೆ.ಜಿ ವಿಭಾಗದಲ್ಲಿ ಕಾಜಲ್ ಧೋಚಕ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ಇಬ್ಬರೂ ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನದ ಬಳಿಕ ಮನೀಷಾ ಅವರ ಈ ಸಾಧನೆ ತಂಡಕ್ಕೆ ಹೊಸ ಹುರುಪು ನೀಡಿದೆ. ಏಷ್ಯನ್ ಗೇಮ್ಸ್‌ನಲ್ಲಿ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಷಾ, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾರಿ ಫುಜಿನಾಮಿ ವಿರುದ್ಧ ಸೋಲು ಕಂಡಿದ್ದರು.



ಇದಾದ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ಗಾಗಿ 59 ಕೆ.ಜಿ ವಿಭಾಗಕ್ಕೆ ಬಡ್ತಿ ಪಡೆದ ಅವರು, ಇದೀಗ ಐತಿಹಾಸಿಕ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ನಿರ್ಧಾರವನ್ನು ಸಾಬೀತುಪಡಿಸಿದ್ದಾರೆ. ಹರಿಯಾಣದ ಜಿಂದ್ ಮೂಲದ ಮನೀಷಾ ಈ ಹಿಂದೆ 57 ಕೆ.ಜಿ.ಯಿಂದ 65 ಕೆ.ಜಿ.ವರೆಗಿನ ವಿವಿಧ ತೂಕದ ವಿಭಾಗಗಳಲ್ಲಿ ಸ್ಪರ್ಧಿಸಿದ್ದಾರೆ. ಇದುವರೆಗೆ ಮೂರು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಭಾರತದ ಮಹಿಳಾ ಕುಸ್ತಿಯಲ್ಲಿ ಈ ಹಿಂದೆ ವಿನೇಶ್ ಫೋಗಟ್ ಮತ್ತು ಅಂತಿಮ್ ಪಂಘಾಲ್ ತಲಾ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಪುರುಷರ ವಿಭಾಗದಲ್ಲಿ 2010ರಲ್ಲಿ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ 66 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದ ಸುಶೀಲ್ ಕುಮಾರ್ ಭಾರತದ ಏಕೈಕ ವಿಶ್ವ ಚಾಂಪಿಯನ್ ಆಗಿದ್ದಾರೆ. ಬಜರಂಗ್ ಪೂನಿಯಾ 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.