ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

FIFA World Cup 2026| ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸ್ಪೇನ್ ಸವಾಲ್; ವಿಶ್ವಕಪ್ ಕಿರೀಟಕ್ಕಾಗಿ ಮಹಾ ಕದನ!

2022ರ ಫಿಫಾ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ಹಾಗೂ 2024ರ ಯುಇಎಫ್‌ಎ ಯುರೋಸ್ ಚಾಂಪಿಯನ್ ಸ್ಪೇನ್, ಫುಟ್‌ಬಾಲ್‌ನ ಅತ್ಯುನ್ನತ ಪ್ರಶಸ್ತಿಯನ್ನು ಗೆಲ್ಲುವ ಗುರಿಯೊಂದಿಗೆ ನ್ಯೂಜೆರ್ಸಿಯಲ್ಲಿ ಮುಖಾಮುಖಿಯಾಗಲಿವೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಹಾಗೂ ಲಮೀನ್‌ ಯಮಾಲ್‌ ಅವರ ನಡುವೆ ಕಾದಾಟ ಅತ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದೆ. ಫೈನಲ್‌ ಪಂದ್ಯ ಜುಲೈ 20 ರಂದು ಭಾರತೀಯ ಕಾಲಮಾನ ತಡರಾತ್ರಿ 12:30ಕ್ಕೆ ಆರಂಭವಾಗಲಿದೆ.

ಫಿಫಾ ವಿಶ್ವಕಪ್‌ಗಾಗಿ ಅರ್ಜೆಂಟೀನಾ-ಸ್ಪೇನ್‌ ನಡುವೆ ಮಹಾ ಕದನ.

ನವದೆಹಲಿ: ಬಹುನಿರೀಕ್ಷಿತ 2026ರ ಫಿಫಾ ವಿಶ್ವಕಪ್‌ ಫುಟ್ಬಾಲ್‌ ಟೂರ್ನಿಯು (FIFA World Cup 2026) ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಟೂರ್ನಿಯ ಫೈನಲ್‌ ಹೈವೋಲ್ಟೇಜ್‌ ಪಂದ್ಯದಲ್ಲಿ ಪರಸ್ಪರ ಕಾದಾಟ ನಡೆಸಲು ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳು (ARG vs SPA) ಸಜ್ಜಾಗುತ್ತಿವೆ. ಈ ಮಹತ್ವದ ಪಂದ್ಯಕ್ಕೆ ನ್ಯೂ ಜೆರ್ಸಿಯ ಈಸ್ಟ್‌ ಋದರ್‌ಫೋರ್ಡ್‌ನ ಮೆಟ್‌ಲೈಫ್‌ ಸ್ಟೇಡಿಯಂನಲ್ಲಿ ವೇದಿಕೆ ಸಿದ್ಧವಾಗಿದೆ. ಈ ಪಂದ್ಯದಲ್ಲಿ ವಿಶ್ವದ ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ಹಾಗೂ ಎದುರಾಳಿ ತಂಡದ ಲಮೀನ್‌ ಯಮಾನ್‌ ಅವರು ಪ್ರಮುಖ ಆಕರ್ಷಣೆಯಾಗಿದೆ.

ಅತ್ಯಂತ ತಾಂತ್ರಿಕ ಕೌಶಲ ಹೊಂದಿರುವ ಪಂದ್ಯವಾಗುವ ನಿರೀಕ್ಷೆಯಿರುವ ಈ ಫೈನಲ್‌ ಪಂದ್ಯದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಇತ್ತ ಜಾಗತಿಕ ಫುಟ್‌ಬಾಲ್ ತಾರೆ ಲಮೀನ್ ಯಮಾಲ್ ಅವರ ನೆರವಿನೊಂದಿಗೆ ಸ್ಪೇನ್ 16 ವರ್ಷಗಳ ಬಳಿಕ ಎರಡನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ.

FIFA World Cup Final: ಲಿಯೋನೆಲ್‌ ಮೆಸ್ಸಿ ಮುರಿಯಬಹುದಾದ ಟಾಪ್‌ 5 ದಾಖಲೆಗಳು!

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಅನ್ನು ಮಣಿಸಿದ್ದ ಅರ್ಜೆಂಟೀನಾ

ಅರ್ಜೆಂಟೀನಾ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯದಲ್ಲಿ ಬಹುತೇಕ ಸಮಯದಲ್ಲಿ ಅರ್ಜೆಂಟೀನಾ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. 55ನೇ ನಿಮಿಷದಲ್ಲಿ ಇಂಗ್ಲೆಂಡ್ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಬಳಿಕ ಅರ್ಜೆಂಟೀನಾಗೆ ಗೋಲು ನೀಡದಂತೆ ಇಂಗ್ಲೆಂಡ್ ಸಂಪೂರ್ಣವಾಗಿ ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಯಿತು.

ಆದರೆ ಮತ್ತೊಮ್ಮೆ ಲಿಯೋನೆಲ್ ಮೆಸ್ಸಿ ಅವರ ಅದ್ಭುತ ಆಟ ಅರ್ಜೆಂಟೀನಾ ತಂಡದ ಕೈ ಹಿಡಿಯಿತು. ಈ ಪಂದ್ಯದಲ್ಲಿ 2-1 ಅಂತರದ ಗೆಲುವು ಸಾಧಿಸುವ ಮೂಲಕ ಅರ್ಜೆಂಟೀನಾ ಸತತ ಎರಡನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು. 85ನೇ ನಿಮಿಷದಿಂದ 92ನೇ ನಿಮಿಷದವರೆಗೆ ಕೇವಲ ಏಳು ನಿಮಿಷಗಳ ಅವಧಿಯಲ್ಲಿ ಮೆಸ್ಸಿ ಎರಡು ಮಹತ್ವದ ಪಾಸ್‌ಗಳನ್ನು ನೀಡಿದರು. ಎನ್ಜೊ ಫೆರ್ನಾಂಡಿಸ್ ಅವರ ಬಾಕ್ಸ್ ಹೊರಗಿನಿಂದ ಹೊಡೆದ ಕಿಕ್ ಹಾಗೂ ಲೌಟಾರೊ ಮಾರ್ಟಿನೆಜ್ ಅವರ ಹೆಡರ್ ಮೂಲಕ ಬಂದ ಗೋಲುಗಳಿಗೆ ಮೆಸ್ಸಿ ನೆರವಾದರು.



ಫ್ರಾನ್ಸ್‌ ತಂಡವನ್ನು ಕಟ್ಟಿ ಹಾಕಿದ್ದ ಸ್ಪೇನ್‌

ಇನ್ನು ಸ್ಪೇನ್ ತಂಡ, ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ಎದುರು ಗೆದ್ದು ಬೀಗಿತ್ತು. ಕಿಲಿಯನ್‌ ಎಂಬಾಫೆ ಒಳಗೊಂಡ ಫ್ರಾನ್ಸ್ ತಂಡವನ್ನು ಅತ್ಯಂತ ಬಲಿಷ್ಠ ಹಾಗೂ ಸ್ಟಾರ್ ಆಟಗಾರರಿಂದ ಕೂಡಿದ ತಂಡವೆಂದು ಪರಿಗಣಿಸಲಾಗಿತ್ತು. ಫ್ರಾನ್ಸ್ ಸುಲಭವಾಗಿ ಗೆದ್ದು ಫೈನಲ್ ಪ್ರವೇಶಿಸಲಿದೆ ಎಂದು ಹಲವರು ನಿರೀಕ್ಷಿಸಿದ್ದರು. ಆದರೆ, ಇದಕ್ಕೆ ಸ್ಪೇನ್‌ ತಂಡ ಅವಕಾಶವನ್ನು ಮಾಡಿಕೊಡಲಿಲ್ಲ.

ಸ್ಪೇನ್‌ ತಂಡ ಬಲಿಷ್ಠ ಮಿಡ್‌ಫೀಲ್ಡರ್‌ಗಳು ಹಾಗೂ ಭೇದಿಸಲಾಗದ ಡಿಫೆಂಡರ್ಸ್‌ ಫ್ರಾನ್ಸ್‌ನ ಆಕ್ರಮಣಕಾರಿ ಆಟಕ್ಕೆ ಕಡಿವಾಣ ಹಾಕಿದರು. ಜೊತೆಗೆ, ಸ್ಪೇನ್‌ನ ಅಟ್ಯಾಕಿಂಗ್‌ ವಿಭಾಗಕ್ಕೂ ಉತ್ತಮ ಅವಕಾಶಗಳನ್ನು ಸೃಷ್ಟಿಸಿತು. ಮಿಕೆಲ್ ಒಯಾರ್ಜಾಬಲ್ ಅವರ ಆರಂಭಿಕ ಪೆನಾಲ್ಟಿ ಹಾಗೂ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಗಳಿಸಿದ ಗೋಲುಗಳ ನೆರವಿನಿಂದ ಸ್ಪೇನ್ 2-0 ಅಂತರದ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಬೇಬಿ ಲಮೀನ್‌ ಯಮಾಲ್‌ ವೈರಲ್ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಲಿಯೋನೆಲ್‌ ಮೆಸ್ಸಿ!

ಅರ್ಜೆಂಟೀನಾದ ರಣರಂತ್ರ ಹೇಗಿದೆ?

ಅರ್ಜೆಂಟೀನಾ ತಂಡ 4-1-3-2 ರಚನೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ನಾಯಕ ಲಿಯೋನೆಲ್ ಮೆಸ್ಸಿ ಹಾಗೂ ಜೂಲಿಯನ್ ಅಲ್ವಾರೆಸ್ ಸ್ಟ್ರೈಕರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ಪೇನ್‌ನ ಮಿಡ್‌ಫೀಲ್ಡ್‌ ಹಾಗೂ ರಕ್ಷಣಾ ವಿಭಾಗವನ್ನು ಭೇದಿಸಿ ಗೋಲು ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿ ರೋಡ್ರಿಗೊ ಡಿ ಪಾಲ್, ಎನ್ಜೊ ಫೆರ್ನಾಂಡಿಸ್ ಹಾಗೂ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರ ಮೇಲಿದೆ.

ರಕ್ಷಣಾತ್ಮಕ ಮಿಡ್‌ಫೀಲ್ಡರ್‌ ಲಿಯಾಂಡ್ರೊ ಪರೆಡಿಸ್, ಚೆಂಡನ್ನು ಮುಂದಕ್ಕೆ ಸಾಗಿಸುವುದರ ಜೊತೆಗೆ ಅಗತ್ಯವಿದ್ದಾಗ ಹಿಂದಕ್ಕೆ ಸರಿದು ನಾಲ್ವರು ಆಟಗಾರರ ಡಿಫೆಂಡರ್ಸ್‌ಗೂ ನೆರವಾಗಲಿದ್ದಾರೆ. ನಹುಯೆಲ್ ಮೊಲಿನಾ, ಕ್ರಿಸ್ಟಿಯನ್ ರೊಮೆರೊ, ಲಿಸಾಂಡ್ರೊ ಮಾರ್ಟಿನೆಜ್ ಹಾಗೂ ನಿಕೋಲಸ್ ಟಾಗ್ಲಿಯಾಫಿಕೊ ಒಳಗೊಂಡ ರಕ್ಷಣಾ ಪಡೆಯೊಂದಿಗೆ ಅವರು ಹೆಚ್ಚುವರಿ ಡಿಫೆಂಡರ್‌ ಪಾತ್ರವನ್ನೂ ನಿರ್ವಹಿಸಲಿದ್ದಾರೆ.



ಸ್ಪೇನ್‌ ತಂಡದ ರಣತಂತ್ರ

ಇನ್ನು ಎದುರಾಳಿ ಸ್ಪೇನ್ ತಂಡ, ಇಡೀ ಟೂರ್ನಿಯಲ್ಲಿ ಅನುಸರಿಸಿದಂತೆ ಮಿಡ್‌ಫೀಲ್ಡ್ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡುವ 4-2-3-1 ರಚನೆಯೊಂದಿಗೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ಮುಂಚೂಣಿಯಲ್ಲಿ ಮಿಕೆಲ್ ಒಯಾರ್ಜಾಬಲ್ ಏಕೈಕ ಸ್ಟ್ರೈಕರ್ ಆಗಿ ಆಡಲಿದ್ದು, ಅಲೆಕ್ಸ್ ಬಯೇನಾ ಹಾಗೂ ಲಮಿನ್ ಯಮಾಲ್ ವಿಂಗರ್‌ಗಳಾಗಿ ಸ್ಟ್ರೈಕರ್‌ಗಳಿಗೆ ನೆರವು ನೀಡಲಿದ್ದಾರೆ. ಚೆಂಡಿನ ನಿಯಂತ್ರಣವನ್ನು ಕಾಯ್ದುಕೊಳ್ಳುವುದು ಹಾಗೂ ದಾಳಿ ರೂಪಿಸುವ ಜವಾಬ್ದಾರಿ ಆಕ್ರಮಣಕಾರಿ ಮಿಡ್‌ಫೀಲ್ಡರ್‌ ಡ್ಯಾನಿ ಓಲ್ಮೊ ಮತ್ತು ಡಿಫೆಂಟರ್‌ ಮಿಡ್‌ಫೀಲ್ಡರ್‌ ಫ್ಯಾಬಿಯನ್ ರೂಯಿಜ್ ಹಾಗೂ ರೊಡ್ರಿ ಅವರ ಮೇಲಿದೆ.

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಸ್ಪೇನ್‌ನ ರಕ್ಷಣಾ ವಿಭಾಗ ಕಳೆದ ಒಂದು ತಿಂಗಳಿನಿಂದ ಬಲಿಷ್ಠವಾಗಿ ಕಂಡಿದೆ. ಮಾರ್ಕ್ ಕುಕುರೆಯಾ, ಪೌ ಕುಬಾರ್ಸಿ, ಐಮೆರಿಕ್ ಲಪೋರ್ಟೆ ಹಾಗೂ ಪೆಡ್ರೊ ಪೊರೊ ರಕ್ಷಣೆ ವಿಭಾಗದ ಜವಾಬ್ದಾರಿ ಹೊತ್ತಿದ್ದಾರೆ. ಈ ಟೂರ್ನಿಯಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಸ್ಪೇನ್ ಕೇವಲ ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿರುವುದು, ಈ ತಂಡದ ರಕ್ಷಣಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಸ್ಪೇನ್‌ನ ಗೆಲುವಿನ ತಂತ್ರದಲ್ಲಿ ಚೆಂಡಿನ ಹಿಡಿತ (Possession) ಪ್ರಮುಖ ಪಾತ್ರ ವಹಿಸಲಿದೆ. 4-2-3-1 ರಚನೆಯು ಹೆಚ್ಚು ಪಾಸಿಂಗ್ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಚೆಂಡಿನ ನಿಯಂತ್ರಣವನ್ನು ಉಳಿಸಿಕೊಂಡು ಪಂದ್ಯದ ಗತಿಯನ್ನು ತಮ್ಮ ಹಿಡಿತದಲ್ಲಿಡಲು ನೆರವಾಗಲಿದೆ.