ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಡೇವಿಸ್ ಕಪ್ (Davis Cup 2026) ಟೆನಿಸ್ ಟೂರ್ನಿಯಲ್ಲಿ ನಿರಾಶಾದಾಯಕ ಆರಂಭ ಕಂಡ ಭಾರತ ತಂಡಕ್ಕೆ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸುಮಿತ್ ನಗಾಲ್ (Sumit Nagal) ಅವರಿಂದ ಗೆಲುವು ಅಗತ್ಯವಿತ್ತು. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ ಆರಂಭದಲ್ಲೇ ಉತ್ತಮ ಪ್ರಭಾವ ಬೀರಿದ್ದ ಧಕ್ಷಿಣೇಶ್ವರ್ ಸುರೇಶ್ ಸೋಲು ಅನುಭವಿಸಿದ್ದರು. ಇದರ ಪರಿಣಾಮ ದಕ್ಷಿಣ ಕೊರಿಯಾ ಮುನ್ನಡೆ ಸಾಧಿಸಿತ್ತು. ಹೀಗಾಗಿ ಭಾರತವನ್ನು ಮತ್ತೆ ಸ್ಪರ್ಧೆಗೆ ತರುವ ಜವಾಬ್ದಾರಿ ನಗಾಲ್ ಅವರ ಮೇಲಿತ್ತು. ಅವರು ತಮ್ಮ ಶಕ್ತಿಮೀರಿ ಹೋರಾಡಿದರೂ, ಅಂತಿಮವಾಗಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ದಕ್ಷಿಣ ಕೊರಿಯಾದ ಹ್ಯೋನ್ ಚುಂಗ್ ಅವರು ಸುಮಿತ್ ನಗಾಲ್ ಅವರನ್ನು 2-6, 6-4, 7-5 ಅಂತರದಲ್ಲಿ ರೋಚಕ ಮೂರು ಸೆಟ್‌ಗಳ ಪಂದ್ಯದಲ್ಲಿ ಮಣಿಸಿದರು. ಈ ಗೆಲುವಿನೊಂದಿಗೆ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಕ್ವಾಲಿಫೈಯರ್ಸ್ ಮುಖಾಮುಖಿಯ ಎರಡನೇ ಸಿಂಗಲ್ಸ್ ಪಂದ್ಯವನ್ನು ದಕ್ಷಿಣ ಕೊರಿಯಾ ಗೆದ್ದುಕೊಂಡಿತು.
ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭ; ಮನು ಭಾಕರ್, ತಜಿಂದರ್ ಪಾಲ್ ಭಾರತದ ಧ್ವಜಧಾರಿ
ಮೊದಲ ಸೆಟ್‌ನಲ್ಲಿ ನಗಾಲ್ ಪ್ರಾಬಲ್ಯ
ಹ್ಯೋನ್ ಚುಂಗ್ ವಿರುದ್ಧ ಸುಮಿತ್ ನಗಾಲ್ ಮೊದಲ ಸೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ 6-2 ಅಂತರದಲ್ಲಿ ಗೆದ್ದರು. ಭಾರತದ ನಂಬರ್-1 ಆಟಗಾರ ಬೇಸ್‌ಲೈನ್‌ನಿಂದಲೇ ಆರಂಭದಿಂದ ಪಂದ್ಯವನ್ನು ನಿಯಂತ್ರಿಸಿದರು. ಚುಂಗ್ ಅವರ ಸರ್ವ್ ಅನ್ನು ಎರಡು ಬಾರಿ ಬ್ರೇಕ್ ಮಾಡಿದ ನಗಾಲ್, ತಮ್ಮ ಲಯವನ್ನು ಮುಂದುವರಿಸಿ ಮೊದಲ ಸೆಟ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.ನಗಾಲ್ ಅವರ ನಿಖರ ಹೊಡೆತಗಳು ಮತ್ತು ಉತ್ತಮ ತಂತ್ರಗಾರಿಕೆಗೆ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿದ್ದ ದಕ್ಷಿಣ ಕೊರಿಯಾದ ಆಟಗಾರನ ಬಳಿ ಸೂಕ್ತ ಉತ್ತರ ಇರಲಿಲ್ಲ.
ಹೋರಾಟದ ಮೂಲಕ ಕಮ್‌ಬ್ಯಾಕ್ ಮಾಡಿದ ಚುಂಗ್
ಎರಡನೇ ಸೆಟ್‌ನಲ್ಲಿ ಹ್ಯೋನ್ ಚುಂಗ್ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದರು. 6-4 ಅಂತರದಲ್ಲಿ ಸೆಟ್ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ನಾಲ್ಕನೇ ಗೇಮ್‌ನಲ್ಲಿ ಏಳು ಬಾರಿ ಡ್ಯೂಸ್ ಎದುರಾದ ಕಠಿಣ ಹೋರಾಟದ ಬಳಿಕ ನಗಾಲ್ ಚುಂಗ್ ಅವರ ಸರ್ವ್ ಮುರಿದು ಮುನ್ನಡೆ ಸಾಧಿಸಿದರು. ಆದರೆ ತವರಿನ ಅಂಗಳದಲ್ಲಿ ಚುಂಗ್ ಕಮ್‌ಬ್ಯಾಕ್ ಮಾಡಲಿಲ್ಲ. ಅವರು ಮತ್ತೆ ನಗಾಲ್ ಅವರ ಸರ್ವ್ ಮುರಿದು ಸ್ಕೋರ್ ಅನ್ನು 4-4ಕ್ಕೆ ತಂದರು. ನಿರ್ಣಾಯಕ ಹಂತದಲ್ಲಿ ನಗಾಲ್ ಮಾಡಿದ ಕೆಲವು ತಪ್ಪುಗಳ ಲಾಭ ಪಡೆದ ಚುಂಗ್, ಅಂತಿಮ ಗೇಮ್‌ನಲ್ಲೂ ಮತ್ತೊಮ್ಮೆ ಸರ್ವ್ ಬ್ರೇಕ್ ಮಾಡಿ ಎರಡನೇ ಸೆಟ್‌ನ್ನು 6-4ರಲ್ಲಿ ಗೆದ್ದುಕೊಂಡರು.
ನಿರ್ಣಾಯಕ ಸೆಟ್‌ನಲ್ಲಿ ರೋಚಕ ಹೋರಾಟ
ನಿರ್ಣಾಯಕ ಸೆಟ್‌ನಲ್ಲಿ ನಗಾಲ್ 1-3ರಿಂದ ಹಿನ್ನಡೆಯಲ್ಲಿದ್ದರು. ಆದರೆ ಅವರು ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಚುಂಗ್ ಅವರ ಸರ್ವ್ ಮುರಿದರು. ಬಳಿಕ ನಾಲ್ಕು ಬಾರಿ ಡ್ಯೂಸ್ ಎದುರಾದ ಮತ್ತೊಂದು ಕಠಿಣ ಗೇಮ್‌ನಲ್ಲಿ ಹೋರಾಡಿ ಸ್ಕೋರ್ ಅನ್ನು ಒಂದು ಹಂತದಲ್ಲಿ 4-4ಕ್ಕೆ ಸಮಗೊಳಿಸಿದರು. ಇಬ್ಬರೂ ತಮ್ಮ ಸರ್ವ್‌ಗಳನ್ನು ಉಳಿಸಿಕೊಳ್ಳುತ್ತಾ ಸಾಗಿದಂತೆ ಪಂದ್ಯದ ಒತ್ತಡ ಮತ್ತಷ್ಟು ಹೆಚ್ಚಾಯಿತು. 5-5ರ ಹಂತದಲ್ಲಿ ಚುಂಗ್ ತಮ್ಮ ಸರ್ವ್‌ನ್ನು ಉಳಿಸಿಕೊಂಡರು. ನಂತರ ಅಂತಿಮ ಗೇಮ್‌ನಲ್ಲಿ ನಗಾಲ್ ಅವರ ಸರ್ವ್ ಮುರಿದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಈ ಸೋಲಿನೊಂದಿಗೆ ಡೇವಿಸ್ ಕಪ್ ಮುಖಾಮುಖಿಯಲ್ಲಿ ಭಾರತ 0-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಇಂದಿನ ದಿನದ ಪಂದ್ಯಗಳು ಇಲ್ಲಿಗೆ ಮುಕ್ತಾಯಗೊಂಡಿವೆ.