ಲಂಡನ್: ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದತ್ತ ಈಗ ಕ್ರಿಕೆಟ್‌ಪ್ರೇಮಿಗಳ ಕುತೂಹಲದ ದೃಷ್ಟಿ ನೆಟ್ಟಿದೆ. ಏಕೆಂದರೆ ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಅಂತಿಮ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಪಂದ್ಯದ ಕೊನೆಯ ದಿನವಾದ ಸೋಮವಾರ ಆತಿಥೇಯ ಇಂಗ್ಲೆಂಡ್ 35 ರನ್ ಬಾರಿಸಿದರೆ ಪಂದ್ಯ ಗೆಲ್ಲುವ ಜತೆಗೆ ಸರಣಿ ಜಯಿಸುವ ಅವಕಾಶ ಇದೆ . ಮತ್ತೊಂದೆಡೆ ಭಾರತ ತಂಡವು ನಾಲ್ಕು ವಿಕೆಟ್‌ಗಳನ್ನು ಕಿತ್ತು ಬುಟ್ಟಿಗೆ ಹಾಕಿಕೊಂಡರೆ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳಬಹುದು. ಓವಲ್ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು 76.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 339 ರನ್ ಗಳಿಸಿದೆ. ಮೋಡ ಕವಿದ ವಾತಾವರಣ ಮತ್ತು ಮಳೆ ಅಡಚಣೆಯಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಭಾರತ ನೀಡಿದ 374 ರನ್‌ಗಳ ಬೃಹತ್ ಗೆಲುವಿನ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತ್ತು. ನಾಲ್ಕನೇ ದಿನವಾದ ಭಾನುವಾರ ಹ್ಯಾರಿ ಬ್ರೂಕ್(111) ಮತ್ತು ಜೋ ರೂಟ್(105) ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಉತ್ತಮ ರನ್ ಕಲೆಹಾಕಿತು.
ರೂಟ್-ಬ್ರೂಕ್ ಬೊಂಬಾಡ್ ಜತೆಯಾಟ
ಬೃಹತ್ ಮೊತ್ತದ ರನ್ ಚೇಸಿಂಗ್ ವೇಳೆ ಇಂಗ್ಲೆಂಡ್‌ಗೆ ರೂಟ್ ಮತ್ತು ಬ್ರೂಕ್ ಆಸರೆಯಾದರು. ಉಭಯ ಆಟಗಾರರು ಕ್ರೀಸ್‌ನಲ್ಲಿ ಬೇರೂರಿ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಭಾರತೀಯ ಬೌಲರ್‌ಗಳ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಬ್ರೂಕ್ 20 ರನ್ ಗಳಿಸಿದ್ದ ವೇಳೆ ಸಿರಾಜ್ ಕ್ಯಾಚ್ ಹಿಡಿದರೂ ಬೌಂಡರಿ ಲೈನ್ ತುಳಿದ ಕಾರಣ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಅವರು ಶತಕ ಬಾರಿಸಿ ಕಂಟಕವಾದರು. 98 ಎಸೆತ ಎದುರಿಸಿದ ಬ್ರೂಕ್ 111 ರನ್ ಬಾರಿಸಿದರು. ರೂಟ್ ಮತ್ತು ಬ್ರೂಕ್ 4 ವಿಕೆಟ್‌ಗೆ 195 ರನ್ ಜತೆಯಾಟ ನಡೆಸಿದರು.
ಬ್ರೂಕ್ ವಿಕೆಟ್ ಪತನ ಬಳಿಕ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡಿತು. ಆ ಬಳಿಕ ಬಂದ ಜಾಕೋಬ್ ಬೆಥೆಲ್(5) ಬೇಗನೆ ವಿಕೆಟ್ ಕಳೆದುಕೊಂಡರು. ರೂಟ್ ಶತಕ ಪೂರ್ತಿಗಳಿಸಿದೊಡನೆ ಅವರ ವಿಕೆಟ್ ಕೂಡ ಬಿತ್ತು. ಕೈ ಜಾರಿದ್ದ ಪಂದ್ಯವನ್ನು ಭಾರತ ಹಿಡಿತಕ್ಕೆ ತಂದಿತು. ಜೇಮಿ ಸ್ಮಿತ್ ವಿಕೆಟ್ ಕಿತ್ತರೆ ಭಾರತಕ್ಕೆ ಗೆಲುವು ಖಚಿತ.
105 ರನ್ ಗಳಿಸಿದ ರೂಟ್ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಇದು ಭಾರತ ವಿರುದ್ಧ ರೂಟ್ ಬಾರಿಸಿದ 13 ಟೆಸ್ಟ್ ಶತಕ. ಮಾತ್ರವಲ್ಲದೆ ಸರಣಿಯೊಂದರಲ್ಲಿ ಭಾರತ ವಿರುದ್ಧ ಅತಿ ಹೆಚ್ಚು ಬಾರಿ 500+ ರನ್ ಬಾರಿಸಿ ಸಾಧನೆಗೈದರು. ಒಟ್ಟು ಮೂರು ಬಾರಿ ಅವರು ಈ ಸಾಧನೆ ಮಾಡಿದರು.
ಸಂಗಕ್ಕರ ದಾಖಲೆ ಪತನ
ಸರಣಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಜೋ ರೂಟ್ ಅಂತಿಮ ಪಂದ್ಯದಲ್ಲಿಯೂ ಶತಕ ಬಾರಿಸಿ ಸಂಭ್ರಮಿಸಿದರು. ಇದೇ ವೇಳೆ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ(38) ಹಿಂದಿಕ್ಕಿ ಅತ್ಯಧಿಕ ಟೆಸ್ಟ್ ಸಾಧಕರ ಪಟ್ಟಿಯಲ್ಲಿ ರೂಟ್(39) ನಾಲ್ಕನೇ ಸ್ಥಾನಕ್ಕೇರಿದರು. ಸಚಿನ್ ತೆಂಡೂಲ್ಕರ್(51) ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IND vs ENG: 36 ವರ್ಷಗಳಲ್ಲಿ ಮೊದಲ ಬಾರಿಗೆ!; ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್, ಜಡೇಜ, ರಾಹುಲ್ ವಿಶೇಷ ದಾಖಲೆ
ಮೊದಲ ಇನಿಂಗ್ಸ್‌ನಲ್ಲಿ ಘಾತಕ ಬೌಲಿಂಗ್ ದಾಳಿ ಮೂಲಕ ತಲಾ ನಾಲ್ಕು ವಿಕೆಟ್ ಕಿತ್ತು ಆಂಗ್ಲರನ್ನು ಕಾಡಿದ್ದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ದ್ವಿತೀಯ ಇನಿಂಗ್ಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲಿಲ್ಲ. ಇದು ಭಾರತಕ್ಕೆ ಹಿನ್ನಡೆಯಾಯಿತು. ಜತೆಗೆ ಆಕಾಶ್‌ದೀಪ್ ಮತ್ತು ಸ್ಪಿನ್ನರ್‌ಗಳಾದ ಜಡೇಜಾ ಮತ್ತು ಸುಂದರ್ ಕೈಚಳಕ ನಡೆಯಲಿಲ್ಲ.