ದುಬೈ: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ(India vs Pakistan) ನಡುವೆ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಬುಧವಾರ ನಡೆದಿದ್ದ ಏಷ್ಯಾ ಕಪ್(Asia Cup 2025) 'ಎ' ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ 41 ರನ್ ಅಂತರದಿಂದ ಗೆದ್ದಿರುವ ಪಾಕಿಸ್ತಾನ 'ಸೂಪರ್ ಫೋರ್' ಹಂತಕ್ಕೆ ಪ್ರವೇಶಿಸಿತು. ಹೀಗಾಗಿ ಭಾನುವಾರ ನಡೆಯುವ ಸೂಪರ್-4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಲಿವೆ.
ಕಳೆದ ಭಾನುವಾರ ನಡೆದಿದ್ದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದ್ದ ಭಾರತ ಮತ್ತೊಮ್ಮೆ ಪಾಕ್‌ಗೆ ಸೋಲಿನ ರುಚಿ ತೋರಿಸಲು ಸಿದ್ಧವಾಗಿದೆ. ಟೂರ್ನಿಯಲ್ಲಿ ಪಾಕ್ ಪ್ರದರ್ಶನ ನೋಡುವಾಗ ಅದು ಸೂಪರ್ 4 ಹಂತದಲ್ಲೇ ನಿರ್ಗಮಿಸುವಂತೆ ಕಾಣುತ್ತಿದೆ. ಬ್ಯಾಟಿಂಗ್ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.
ಒಂದೊಮ್ಮೆ ಸೂಪರ್-4 ಹಂತಲ್ಲಿಯೂ ಭಾರತ ಮತ್ತು ಪಾಕ್ ಅಗ್ರ ಎರಡು ಸ್ಥಾನ ಗಳಿಸಲು ಯಶಸ್ವಿಯಾಗಿ ಉಭಯ ತಂಡಗಳು ಫೈನಲ್‌ಗೇರಿದರೆ ಸತತ ಮೂರನೇ ಭಾನುವಾರ ಕೂಡ ಭಾರತ-ಪಾಕ್ ಪಂದ್ಯ ನಡೆಯಲಿದೆ. ಸ್ವಾರಸ್ಯವೆಂದರೆ, ಏಷ್ಯಾ ಕಪ್ ಚರಿತ್ರೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಇಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ!.
ನೋ ಹ್ಯಾಂಡ್‌ಶೇಕ್
ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರಿಂದ ಅಂತರ ಕಾಯ್ದುಕೊಂಡಿದ್ದ ಭಾರತ ಸೂಪರ್-4 ನಲ್ಲಿಯೂ ಇದೇ ನಿರ್ಧಾರಕ್ಕೆ ಬುದ್ಧವಾಗಿರಲಿದೆ. ಕಳೆದ ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಯಾವ ಹಂತದಲ್ಲೂ ಮಾತನಾಡಿರಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಅಲ್ಲದೆ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರೂ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡಿದ್ದರು.