ಕೊಲಂಬೊ, ಫೆ.28: ಸೆಮಿಫೈನಲ್ ಪ್ರವೇಶದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ರೋಚಕ 5 ರನ್ ಅಂತರದಿಂದ ಗೆದ್ದರೂ, ರನ್‌ರೇಟ್ ಕೊರತೆಯಿಂದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು. ರನ್ ರೇಟ್‌ನಲ್ಲಿ ಮುಂದಿದ್ದ ನ್ಯೂಜಿಲ್ಯಾಂಡ್‌ಗೆ ಸೆಮಿ ಅದೃಷ್ಟ ದೊರಕಿತು.
ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಶ್ರೀಲಂಕಾವನ್ನು 147 ಅಥವಾ ಅದಕ್ಕಿಂತ ಕಡಿಮೆ ರನ್‌ಗೆ ಆಲೌಟ್ ಮಾಡಬೇಕಿತ್ತು. ಅಥವಾ 65 ರನ್ ಅಂತರದ ಗೆಲುವು ಸಾಧಿಸಬೇಕಿತ್ತು. ಆದರೆ ಇದನ್ನೂ ಸಾಧಿಸಲು ವಿಫಲವಾದ ಕಾರಣ ರನ್‌ರೇಟ್‌ನಲ್ಲಿ ಮುಂದಿದ್ದ ನ್ಯೂಜಿಲ್ಯಾಂಡ್ ಸೆಮಿಫೈನಲ್‌ಗೆ ಲಗ್ಗೆಯಟ್ಟಿತು.
ಶನಿವಾರ ಪಲ್ಲಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಾಕಿಸ್ತಾನ ತಂಡಕ್ಕೆ ಆರಂಭಿಕರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ದಾಖಲೆಯ ಜತೆಯಾಟ ನಡೆಸುವ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಜೋಡಿ 15 ಓವರ್ ತನಕ ಬ್ಯಾಟಿಂಗ್ ನಡೆಸಿ 176 ರನ್ ಒಟ್ಟುಗೂಡಿಸಿತು. ಅಂತಿಮವಾಗಿ ತಂಡ 8 ವಿಕೆಟ್‌ಗೆ 212 ರನ್ ಪೇರಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 6 ವಿಕೆಟ್‌ಗೆ 207 ರನ್ ಗಳಿಸಲಷ್ಟೇ ಶಕ್ತವಾಗಿ 5 ರನ್ ಅಂತರದ ಸೋಲು ಕಂಡಿತು.
ಚೇಸಿಂಗ್ ವೇಳೆ ಶ್ರೀಲಂಕಾ ಆರಂಭದಲ್ಲೇ ಆಘಾತ ಎದುರಿಸಿತು. ತಂಡದ ಮೊತ್ತ 8 ರನ್ ಆಗುವಷ್ಟರಲ್ಲಿ ಆರಂಭಕಾರ ಪಾತುಮ್ ನಿಸ್ಸಂಕ(3) ವಿಕೆಟ್ ಕಳೆದುಕೊಂಡಿತು. ಕಾಮಿಲ್ ಮಿಶಾರ(26) ಮತ್ತು ಚರಿತ್ ಅಸಲಂಕಾ(25) ರನ್‌ಗೆ ಆಟ ಮುಗಿಸಿದರು. ಈ ಹಂತದಲ್ಲಿ ಪಾಕಿಸ್ತಾನ ಸೆಮಿಗೆ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ ಅಂತಿಮ ಹಂತದಲ್ಲಿ ಬೀಸಾಟವಾಡಿದ ಪವನ್ ರಥನಾಯಕೆ ಮತ್ತು ನಾಯಕ ದಾಶುನ್ ಶನಕ ಅರ್ಧಶತಕ ಬಾರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿ ಬಿಟ್ಟರು. ರಥನಾಯಕೆ 58 ರನ್ ಬಾರಿಸಿದರೆ, ಶನಕ ಪಾಕ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿ 31 ಎಸೆತಗಳಿಂದ ಅಜೇಯ 76 ರನ್ ಸಿಡಿಸಿದರು. ಅವರ ಈ ಅಬ್ಬರದ ಬ್ಯಾಟಿಂಗ್ ವೇಳೆ 8 ಸಿಕ್ಸರ್ ಸಿಡಿಯಿತು. ಶಾಹೀನ್ ಅಫ್ರಿದಿ ಎಸೆತ ಅಂತಿಮ ಓವರ್‌ನಲ್ಲಿ ಮೂರು ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ 22 ರನ್ ದೋಚಿದರು. ಆದರೆ ಅಂತಿಮ ಎರಡು ಎಸೆತದಲ್ಲಿ 5 ರನ್ ತೆಗೆಯುವಲ್ಲಿ ಎಡವಿದರು. ಪಾಕ್ ಪರ ಅಬ್ರಾರ್ ಅಹ್ಮದ್ 3 ವಿಕೆಟ್ ಪಡೆದರು.
ಫರ್ಹಾನ್ ಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ 60 ಎಸೆತಗಳಿಂದ 5 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 100 ರನ್ ಬಾರಿಸಿ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಇದೇ ವೇಳೆ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 12 ವರ್ಷಗಳ ಹಳೆಯ ಟಿ20 ವಿಶ್ವಕಪ್ ದಾಖಲೆಯನ್ನು ಮುರಿದರು. 38 ರನ್ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಕೊಹ್ಲಿ( 319) ಅವರ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆಯನ್ನು ಹಿಂದಿಕ್ಕಿದರು. ಆದರೆ ತಂಡ ಸೆಮಿಫೈನಲ್ ಪ್ರವೇಶಿಸದ ಕಾರಣ ಅವರ ಶತಕ ವ್ಯರ್ಥವಾಯಿತು.
ಮತೋರ್ವ ಬ್ಯಾಟರ್ ಫಖರ್ ಜಮಾನ್ ಅರ್ಧಶತಕ ಬಾರಿಸಿದರು. 4 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಸಿ 84 ರನ್ ಗಳಿಸಿದರು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಪಾಕ್ ನಾಟಕೀಯ ಕುಸಿತ ಕಂಡಿತು. ಆ ಬಳಿಕ ಬ್ಯಾಟ್ ಮಾಡಿದ 7 ಮಂದಿ ಕೂಡ ಒಂದಂಕಿಗೆ ಸೀಮಿತರಾಗಿ ವಿಕೆಟ್ ಕಳೆದುಕೊಂಡರು. ಲಂಕಾ ಪರ ದಿಲ್ಶನ್ ಮಧುಶಂಕ 3 ವಿಕೆಟ್ ಕಿತ್ತರು.