ಕರಾಚಿ, ಜ.25: ಟಿ20 ವಿಶ್ವಕಪ್(T20 World Cup 2026)ನಿಂದ ಬಾಂಗ್ಲಾದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಹೊರಹಾಕಿದ ಬೆನ್ನಲ್ಲೇ, ಆ ದೇಶಕ್ಕೆ ಅನ್ಯಾಯವಾಗಿ ಎಂದು ಅದರ ಬೆಂಬಲಕ್ಕೆ ನಿಂತು ತನಗೂ ವಿಶ್ವಕಪ್‌ನಲ್ಲಿ ಆಡಲು ಆಸಕ್ತಿ ಇಲ್ಲ, ತಾನೂ ಟೂರ್ನಿಯಿಂದ ಹಿಂದೆ ಸರಿಯಬಹುದು ಎಂದು ಐಸಿಸಿಗೆ ಪೊಳ್ಳು ಬೆದರಿಕೆ ಹಾಕಿದ್ದ ಪಾಕಿಸ್ತಾನ(Pakistan squad for T20 World Cup) ಇದೀಗ ಐಸಿಸಿಯ ಖಡಕ್ ಎಚ್ಚರಿಕೆಗೆ ಹೆದರಿ ಟೂರ್ನಿಗೆ ತಂಡವನ್ನು ಪ್ರಕಟಿಸಿದೆ. ಭಾನುವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಗ್ರೂಪ್ ಎ ನಲ್ಲಿ ಪಾಕಿಸ್ತಾನ ತಂಡವು ಸಹ-ಆತಿಥೇಯ ಮತ್ತು ಹಾಲಿ ಚಾಂಪಿಯನ್ ಭಾರತ, ನೆದರ್ಲ್ಯಾಂಡ್ಸ್, ಯುಎಸ್ಎ ಮತ್ತು ನಮೀಬಿಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. 2009ರ ಚಾಂಪಿಯನ್ ಪಾಕ್ ತಂಡವನ್ನು ಸಲ್ಮಾನ್ ಅಲಿ ಅಘಾ ಮುನ್ನಡೆಸಲಿದ್ದು, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಆದರೆ ಮಾಜಿ ನಾಯಕ ಬಾಬರ್ ಅಜಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೌಫ್ ಅನುಪಸ್ಥಿತಿಯಲ್ಲಿ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
"ರೌಫ್ ಪಾಕಿಸ್ತಾನ ಪರ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ, ಆದರೆ ತಂಡವನ್ನು ಆಯ್ಕೆ ಮಾಡುವಾಗ ನಾವು ಶ್ರೀಲಂಕಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ" ಎಂದು ಜಾವೇದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಾಂಗ್ಲಾದೇಶಕ್ಕೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಗುಳಿಯಲು ನಿರ್ಧರಿಸಿದರೆ, ಆಗ ಐಸಿಸಿ ರ್‍ಯಾಂಕಿಂಗ್ ಆಧಾರದಲ್ಲಿ ಉಗಾಂಡಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಗುತ್ತಿತ್ತು. ರ್‍ಯಾಂಕಿಂಗ್ ಪಟ್ಟಿಯಲ್ಲಿ ಉಗಾಂಡ 21ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ತಂಡ
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ಮೊಹಮ್ಮದ್ ನಫಾಯ್ (ವಿ.ಕೀ.), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್ (ವಿ.ಕೀ.), ಸೈಮ್ ಅಯೂಬ್, ಶಾಹೀನ್ ಶಾ ಆಫ್ರಿದಿ, ಶಾದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಕ್.
ಪಾಕಿಸ್ತಾನದ ಗುಂಪು ಹಂತದ ವೇಳಾಪಟ್ಟಿ
ಪಾಕಿಸ್ತಾನ vs ನೆದರ್‌ಲ್ಯಾಂಡ್ಸ್; ಫೆಬ್ರವರಿ 7, ಕೊಲಂಬೊ
ಪಾಕಿಸ್ತಾನ vs ಯುಎಸ್‌ಎ; ಫೆಬ್ರವರಿ 10, ಕೊಲಂಬೊ
ಪಾಕಿಸ್ತಾನ vs ಭಾರತ; ಫೆಬ್ರವರಿ 15, ಕೊಲಂಬೊ
ಪಾಕಿಸ್ತಾನ vs ನಮೀಬಿಯಾ; ಫೆಬ್ರವರಿ 18, ಕೊಲಂಬೊ