ಮುಲ್ಲನ್‌ಪುರ, ಮಾ.31: ತುಂತುರು ಮಳೆಯ ಮಧ್ಯೆ ಹಾವು-ಏಣಿ ಆಟದಂತೆ ಸಾಗಿದ ಮಂಗಳವಾರದ ರೋಚಕ ಐಪಿಎಲ್(IPL 2026) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(PBKS vs GT) ತಂಡ ಗುಜರಾತ್ ಟೈಟಾನ್ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿ ಹಾಲಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನೆಡೆಸಿದ ಗುಜರಾತ್ ಟೈಟಾನ್ಸ್ , ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್ ಬಾರಿಸಿತು, ಜಬಾಬಿತ್ತ ಪಂಜಾಬ್ ಕಿಂಗ್ಸ್ 19.1 ಓವರ್‌ಗಳಲ್ಲಿ 7 ವಿಕೆಟ್‌ಗೆ165 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಕೂಪರ್ ಕಾನೋಲಿ ಚೊಚ್ಚಲ ಅರ್ಧಶತಕ
ಚೇಸಿಂಗ್ ವೇಳೆ ಪಂಜಾಬ್, ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ(7) ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಪ್ರಭ್‌ಸಿಮ್ರನ್ ಸಿಂಗ್ ಮತ್ತು ಪದಾರ್ಪಣ ಪಂದ್ಯವಾಡಿದ ಕೂಪರ್ ಕಾನೋಲಿ ಉತ್ತಮ ಜತೆಯಾಟ ನೆಡೆಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 24 ಎಸೆತ ಎದುರಿಸಿದ ಪ್ರಭ್‌ಸಿಮ್ರನ್ 4 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 37 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್, ಕೈಗೆ ಚೆಂಡು ತಗುಲಿದ ಬಳಿಕ ನೋವಿನ ಮಧ್ಯೆ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗಿ ಕ್ಯಾಚ್ ನೀಡಿ 18 ರನ್‌ಗೆ ಔಟಾದರು.
ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್‌ಗೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಾವೆಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು, ಮುಂದಿನ ಓವರ್‌ನಲ್ಲಿ ಮತ್ತೆರಡು ವಿಕೆಟ್ ಕೆಡವಿ ಒತ್ತಡ ಹೇರಿದರು. ಆದರೆ ಮತ್ತೊಂದು ತುದಿಯಲ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದ ಕೂಪರ್ ಕಾನೋಲಿ ಸೊಗಸಾದ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿ ಮಿಂಚಿದರು. ಕೊನೆಯ ತನಕ ಅಜೇಯವಾಗಿ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 44 ಎಸೆತ ಎದುರಿಸಿದ ಅವರು ತಲಾ 5 ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 72* ರನ್ ಬಾರಿಸಿದರು. ಗುಜರಾತ್ ತಂಡದ ಬೌಲರ್‌ಗಳು ಒಟ್ಟಾರೆ 14 ಸಿಕ್ಸರ್‌ಗಳನ್ನು ಹೊಡೆಸಿಕೊಂಡರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್‌ಗೆ ಮಾರ್ಕೊ ಜಾನ್ಸೆನ್ ಆರಂಭಿಕ ಆಘಾತವಿಕ್ಕಿದರು. ಎಡಗೈ ಬ್ಯಾಟರ್ ಸಾಯಿ ಸುದರ್ಶನ್ (13 ರನ್) ವಿಕೆಟ್ ಕಿತ್ತರು. ನಂತರ ಜತೆಯಾದ ಶುಭಮನ್ ಗಿಲ್ (39 ರನ್) ಹಾಗೂ ಜೋಸ್ ಬಟ್ಲರ್ (38 ರನ್) ದ್ವಿತೀಯ ವಿಕೆಟ್‌ಗೆ 46 ರನ್‌ಗಳ ಜತೆಯಾಟ ಆಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
PBKS vs GT: 11 ಎಸೆತ ಎಸೆದು ಅನಪೇಕ್ಷಿತ ದಾಖಲೆ ಬರೆದ ಅರ್ಶ್‌ದೀಪ್ ಸಿಂಗ್
ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಟೈಟಾನ್ಸ್ ಮತ್ತೆ ಕುಸಿತ ಕಂಡಿತು. ಪದಾರ್ಪಣ ಪಂದ್ಯವಾಡಿದ ಗ್ಲೆನ್ ಫಿಲಿಪ್ಸ್ 25 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್(18), ಶಾರೂಖ್ ಖಾನ್(4) ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಪಂಜಾಬ್ ಪರ ಕನ್ನಡಿಗ ಪಂಜಾಬ್ ಕಿಂಗ್ಸ್ ಪರ ಉತ್ತಮ ದಾಳಿ ನಡೆಸಿದ ವಿಜಯಕುಮಾರ್ ವೈಶಾಕ್ 3 ವಿಕೆಟ್ ಹಾಗೂ ಯುಜ್ವೆಂದರ್ ಚಹಾಲ್ 2 ವಿಕೆಟ್ ಪಡೆದು ಮಿಂಚಿದರು. ಅನುಭವಿ ಅರ್ಶ್‌ದೀಪ್ ಸಿಂಗ್ ದುಬಾರಿಯಾದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ವಿಕೆಟ್ ಲೆಸ್ ಎನಿಸಿ 42 ರನ್‌ಗಳನ್ನು ಬಿಟ್ಟುಕೊಟ್ಟರು. ಜತೆಗೆ ಒಂದು ಓವರ್ ಪೂರ್ಣಗೊಳಿಸಲು 11 ಎಸೆತ ಎಸೆದು ಅನಗತ್ಯ ದಾಖಲೆ ಬರೆದರು.