ಬೆಂಗಳೂರು: 12 ವರ್ಷಗಳ ಬಳಿಕ ಮತ್ತು 3ನೇ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್(IND vs NZ final) ಪಟ್ಟಕ್ಕೇರುವ ಮೂಲಕ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah) ಶ್ಲಾಘಿಸಿದ್ದಾರೆ. ಟ್ವಿಟರ್ ಎಕ್ಸ್ ಖಾತೆಯಲ್ಲಿ ಉಭಯ ನಾಯಕರು ಚಾಂಪಿಯನ್ ಭಾತಕ್ಕೆ ಅಭಿನಂದಿಸಿದ್ದಾರೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪ್ರಶಸ್ತಿ ಕಾಳಗದಲ್ಲಿ ರೋಹಿತ್ ಶರ್ಮ ಪಡೆ ನ್ಯೂಜಿಲ್ಯಾಂಡ್ ತಂಡವನ್ನು ನಾಲ್ಕು ವಿಕೆಟ್ ಅಂತರದಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು.
ಟ್ರೋಫಿ ಮರಳಿ ತಂದಿರುವುದು ಸಂತಸ ತಂದಿದೆ; ಮೋದಿ
'ಟೂರ್ನಿಯುದ್ದಕ್ಕೂ ಅಸಾಧಾರಣ ಆಟದೊಂದಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮರಳಿ ತಂದಿರುವುದು ಹೆಮ್ಮೆಯ ವಿಷಯ. ತಂಡಕ್ಕೆ ಅಭಿನಂದನೆಗಳು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಆಟ ಹೆಚ್ಚು ಖುಷಿಕೊಟ್ಟಿದೆ; ಸಿದ್ದರಾಮಯ್ಯ
'ಇಡೀ ಪಂದ್ಯಾವಳಿಯಲ್ಲಿ ಸೋಲಿಲ್ಲದ ಸರದಾರರಾದ ಭಾರತೀಯ ತಂಡಕ್ಕೆ ಅಭಿನಂದನೆಗಳು. ಬೌಲಿಂಗ್, ಬ್ಯಾಟಿಂಗ್, ಕ್ಷೇತ್ರರಕ್ಷಣೆ ಹೀಗೆ ಎಲ್ಲಾ ವಿಭಾಗಗಳಲ್ಲೂ ನಮ್ಮವರ ಆಟ ಹುಬ್ಬೇರಿಸುವಂತಿತ್ತು. ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತಾ, ನಿರಂತರವಾಗಿ ತಂಡವನ್ನು ಗೆಲುವಿನ ದಡ ಸೇರಿಸುತ್ತಿರುವ ನಾಡಿನ ಮನೆಮಗ ಕೆ.ಎಲ್. ರಾಹುಲ್ ಆಟ ಹೆಚ್ಚು ಖುಷಿಕೊಟ್ಟಿದೆ. ಭಾರತ ಗೆದ್ದಿದೆ.. ಈ ಸಲ ಕಪ್ ನಮ್ದೆ' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೆ.ಎಲ್ ರಾಹುಲ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ 5ನೇ ಕನ್ನಡಿಗ ಎನಿಸಿದರು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವಿನಯ್ ಕುಮಾರ್ ಈ ಹಿಂದಿನ ಸಾಧಕರು. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಗರಿಷ್ಠ 4 ಐಸಿಸಿ ಟ್ರೋಫಿ ಗೆದ್ದ ಭಾರತೀಯ ದಾಖಲೆ ಬರೆದರು. ಎಂ.ಎಸ್ ಧೋನಿ, ಯುವರಾಜ್ ಸಿಂಗ್, ವಿರೇಂದ್ರ ಸೆಹವಾಗ್, ಹರ್ಭಜನ್ ಸಿಂಗ್ ತಲಾ 3 ಐಸಿಸಿ ಟ್ರೋಫಿ ಗೆದ್ದಿದ್ದಾರೆ.
ಇದನ್ನೂ ಓದಿ IND vs NZ Finla: ಚಾಂಪಿಯನ್ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?
ಭಾನುವಾರ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್‌ಗಳ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮ(76) ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು.