ಮುಂಬಯಿ, ಮಾ.4: ಈ ವರ್ಷ ತವರಿನಲ್ಲಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಳ್ಳುತ್ತಿರುವ ಹಾಲಿ ಚಾಂಪಿಯನ್ ಭಾರತ ತಂಡ ಗುರುವಾರ ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ನಿರ್ಣಾಯಕ ಸೆಮಿಫೈನಲ್(T20 World Cup semi-final) ಪಂದ್ಯದಲ್ಲಿ ಇಂಗ್ಲೆಂಡ್(IND vs ENG) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ.
ವಾಂಖೆಡೆಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದು, ಅದರಲ್ಲೂ ಇಬ್ಬನಿಯ ಸಮಸ್ಯೆ ಇರುವ ಕಾರಣ ಎಷ್ಟೇ ದೊಡ್ಡ ಮೊತ್ತವನ್ನಾದರೂ ಇಲ್ಲಿ ಚೇಸಿಂಗ್ ನಡೆಸಿ ಗೆಲ್ಲಬಹುದು. ಹೀಗಾಗಿ ತಂಡದಲ್ಲಿ ಶಕ್ತಿಗಿಂತ ಯುಕ್ತಿಯಲ್ಲಿ ಬೌಲಿಂಗ್ ನಡೆಸುವ ಚಾಣಕ್ಯ ಬೌಲರ್ ಅಗತ್ಯ. ಕಳೆದ ಎರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಅರ್ಶ್‌ದೀಪ್ ಸಿಂಗ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಸ್ಥಾನದಲ್ಲಿ ಕುಲ್‌ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವ ಸಾಧ್ಯತೆ ಅಧಿಕ. ಉಭಯ ಆಟಗಾರರು ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಕೂಡ ಹೊಂದಿದ್ದಾರೆ.
ಉಳಿದಂತೆ ಯಾವುದೇ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ರಿಂಕು ಸಿಂಗ್ ಬದಲು ಅವಕಾಶ ಪಡೆದ ಸಂಜು ಸ್ಯಾಮ್ಸನ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದಾರೆ. ಹೀಗಾಗಿ ಅವರನ್ನು ಬಿಡುವುದು ಅಸಾಧ್ಯ. ಅಭಿಷೇಕ್ ಶರ್ಮ ಬ್ಯಾಟಿಂಗ್ ವೈಫಲ್ಯದ ಮಧ್ಯೆಯೂ ಈ ಪಂದ್ಯದಲ್ಲಿ ಆಡುವುದು ಖಚಿತ.
ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ತಿಲಕ್ ವರ್ಮ ಮತ್ತು ನಾಯಕ ಸೂರ್ಯಕುಮಾರ್ ಯಾದವ್‌ಗೆ ಮುಂಬೈ ಮೈದಾನದಲ್ಲಿ ಅಪಾರ ಐಪಿಎಲ್ ಆಡಿದ ಅನುಭವವಿದೆ. ಶಿವಂ ದುಬೆಗೂ ಇದು ತವರು ಮೈದಾನ ಹೀಗಾಗಿ ಇವರೆಲ್ಲ ಇದರ ಲಾಭವೆತ್ತಿದ್ದರೆ ಭಾರತಕ್ಕೆ ಗೆಲವು ಖಚಿತ.
ಭಾರತ ಕ್ರಿಕೆಟ್ ತಂಡದ ಅಭ್ಯಾಸಕ್ಕೆ ಅಡ್ಡಿಯಾದ ಚಂದ್ರಗ್ರಹಣ
ಡಿಸೆಂಬರ್ 2017 ರಿಂದ ಭಾರತ ವಾಂಖೆಡೆಯಲ್ಲಿ ಆಡಿದ ಟಿ20 ಪಂದ್ಯದಲ್ಲಿ ಸೋತಿಲ್ಲ. ಭಾರತವು ಇಲ್ಲಿ ಒಟ್ಟಾರೆ ಏಳು ಟಿ20 ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳಲ್ಲಿ ಜಯಗಳಿಸಿದೆ. ಎರಡು ಸೋಲುಗಳಲ್ಲಿ ಒಂದು ಸೋಲು ಇಂಗ್ಲೆಂಡ್ ವಿರುದ್ಧವೇ 2012 ರಲ್ಲಿ ದಾಖಲಾಗಿತ್ತು.
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮುಖಾಮುಖಿ ದಾಖಲೆ
ಪಂದ್ಯ: 2
ಭಾರತ ಗೆಲುವು: 1
ಇಂಗ್ಲೆಂಡ್ ಗೆಲುವು: 1
ಭಾರತ ಸಂಭಾವ್ಯ ಆಡುವ ಬಳಗ
ಅಭಿಷೇಕ್ ಶರ್ಮ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್‌ದೀಪ್ ಯಾದವ್.