ಬೆಂಗಳೂರು, ಮಾ.3: ಇಸ್ರೇಲ್-ಇರಾನ್ ಯುದ್ಧದಿಂದಾಗಿ ರದ್ದುಗೊಂಡಿದ್ದ ವಿಮಾನಯಾನ ಸೇವೆ ಸೋಮವಾರ ಪುನರಾರಂಭವಾಗಿದ್ದು, ದುಬೈ ವಿಮಾನ ನಿಲ್ದಾಣದಲ್ಲಿ ಹಲವು ದಿನಗಳಿಂದ ಸಿಲುಕಿಕೊಂಡಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಮಂಗಳವಾರ ಭಾರತಕ್ಕೆ ಮರಳಿದ್ದಾರೆ. ಬೆಂಗಳೂರಿಗೆ ಮರಳಿದ ಅವರು ಈ ವಿಚಾರವನ್ನು ತಮ್ಮ ಟ್ವಿಟರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸುರಕ್ಷಿತವಾಗಿ ಮನೆಗೆ ತಲುಪಿದೆ ಎಂದು ಪೋಸ್ಟ್ ಮಾಡಿದ್ದಾರೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿಂಧು, ಫೆಬ್ರವರಿ 28 ರ ಶನಿವಾರದಿಂದ ದುಬೈನಲ್ಲಿ ಸಿಲುಕಿಕೊಂಡಿದ್ದರು.
ಮಂಗಳವಾರ ಭಾರತಕ್ಕೆ ಮರಳಿರುವುದಾಗಿ ಸಿಂಧು ಬಹಿರಂಗಪಡಿಸಿದ್ದು, ತಾನು ಸುರಕ್ಷಿತವಾಗಿ ಮನೆಗೆ ಮರಳುವಂತೆ ಮಾಡಿದ್ದಕ್ಕಾಗಿ ದುಬೈ ಅಧಿಕಾರಿಗಳು, ವಿಮಾನ ನಿಲ್ದಾಣ ಸಿಬ್ಬಂದಿ ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
"ಬೆಂಗಳೂರಿನಲ್ಲಿರುವ ಮನೆಗೆ ಸುರಕ್ಷಿತವಾಗಿ ಹಿಂತಿರುಗಿದ್ದೇನೆ. ಕಳೆದ ಕೆಲವು ದಿನಗಳು ತೀವ್ರ ಅನಿಶ್ಚಿತತೆಯಿಂದ ಕೂಡಿದ್ದವು, ಆದರೆ ನನ್ನ ಮನೆಗೆ ಹಿಂತಿರುಗಿದ್ದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಬಹಳ ಕಷ್ಟದ ಸಮಯದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಹೃತ್ಪೂರ್ವಕ ಧನ್ಯವಾದಗಳು. ಸಹಾನುಭೂತಿ ಮತ್ತು ವೃತ್ತಿಪರತೆ ಪದಗಳಲ್ಲಿ ಹೇಳಲಾಗದಷ್ಟು ದೊಡ್ಡದಾಗಿದೆ" ಎಂದು ಸಿಂಧು ಟ್ವೀಟ್ ಮಾಡಿದ್ದಾರೆ.
ಯುದ್ಧದ ಪರಿಸ್ಥಿತಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದುಬೈ, ಅಬುಧಾಬಿ, ರಿಯಾದ್, ಜೆಡ್ಡಾ, ದೋಹಾ ಮತ್ತಿತರ ನಗರಗಳ ವಾಯು ಪ್ರದೇಶಗಳನ್ನು ನಿರ್ಬಂಧಿಸಿದ ಕಾರಣದಿಂದಾಗಿ ಶನಿವಾರದಿಂದ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು.
ಸೋಮವಾರ ಬೆಳಗ್ಗೆಯಿಂದ ಪರಿಸ್ಥಿತಿ ಆಧರಿಸಿ ವಿಮಾನ ಸೇವೆ ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಂತೆ ಸೋಮವಾರ ರಾತ್ರಿ 10ಕ್ಕೆ ಅಬುಧಾಬಿಯಿಂದ ಎಥಿಹಾದ್ ಏರ್‌ಲೈನ್ಸ್ ಮೂಲಕ 100ಕ್ಕೂ ಅಧಿಕ ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಕೊಹ್ಲಿ ಎಂದೆಂದಿಗೂ ಆರ್‌ಸಿಬಿಯ ಐಕಾನ್ ಆಗಿರುತ್ತಾರೆ; ಇದು ನಿವೃತ್ತಿಯ ಸುಳಿವೇ?
ಅರಬ್ ದೇಶಗಳ ಮೇಲೆ ಇರಾನ್ ದಾಳಿಯಿಂದಾಗಿ ಕೆಲ ಫುಟ್ಬಾಲ್ ಪಂದ್ಯಗಳು ಮುಂಡೂಡಿಕೆಯಾಗಿವೆ. ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಂಡ ಅಲ್-ನಸ್ರ್ ದುಬೈನಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್-2 ಟೂರ್ನಿಯ ಪಂದ್ಯ ಆಡಬೇಕಿತ್ತು. ಟೂರ್ನಿಯ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ. ಎಎಫ್‌ಸಿ ಚಾಂಪಿಯನ್ಸ್ ಲೀಗ್ ಎಲೈಟ್, ಎಫ್‌ಸಿ ಚಾಲೆಂಜ್ ಲೀಗ್‌ನ ಹಲವು ಪಂದ್ಯಗಳು ಕೂಡಾ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಕತಾರ್ ಫುಟ್ಬಾಲ್ ಫೆಡರೇಷನ್ ಕೂಡಾ ತನ್ನೆಲ್ಲಾ ಪಂದ್ಯಗಳನ್ನು ಮುಂದೂಡಿದೆ.