ಇರಾನ್ ಮತ್ತು ಇಸ್ರೇಲ್-ಯುಎಸ್ (Iran- US Conflict) ನಡುವಿನ ಯುದ್ಧ ಆರಂಭವಾಗಿದ್ದು, ಗಲ್ಫ್ ರಾಷ್ಟ್ರದಲ್ಲಿರುವ ಅಮೆರಿಕದ ವಾಯುನೆಲೆ ಸೇರಿದಂತೆ ಅನೇಕ ಕಡೆಗಳಲ್ಲಿ ಇರಾನ್ ದಾಳಿ ನಡೆಸುತ್ತಿದೆ. ಕ್ಷಿಪಣಿ ಮತ್ತು ಬಾಂಬ್ ಸ್ಫೋಟಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಇರಾನ್, ಇಸ್ರೇಲ್ ಮತ್ತು ನೆರೆಯ ದೇಶಗಳಲ್ಲಿ ವಾಯು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅಬುದಾಬಿ ಹಾಗೂ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿದ್ದು, ಭಾರತೀಯರು ಸಿಲುಕಿಕೊಂಡಿದ್ದಾರೆ. ಭಾರತದ ಪ್ರಸಿದ್ಧ ಬ್ಯಾಡ್ಮಿಂಟನ್ (PV Sindhu) ಆಟಗಾರ್ತಿ ಪಿ.ವಿ. ಸಿಂಧು ಕೂಡ ಸೇರಿದ್ದಾರೆ.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಶಟ್ಲರ್ ಪಿವಿ ಸಿಂಧು ದುಬೈನಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದಾರೆ. ಮಂಗಳವಾರ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ಗಾಗಿ ಸಿಂಧು ಬರ್ಮಿಂಗ್ಹ್ಯಾಮ್‌ಗೆ ತೆರಳುತ್ತಿದ್ದಾಗ, ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು. ಆದರೆ ವಾಯು ಪ್ರದೇಶ ಮುಚ್ಚಿದ್ದರಿಂದ ಸಾವಿರಾರು ವಿಮಾನಗಳು ರದ್ದಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಪರಿಸ್ಥಿತಿಯನ್ನು ಹಂಚಿಕೊಂಡಿರುವ ಸಿಂಧು, ಕ್ಷಿಪಣಿಗಳ ಶಬ್ದ ಕೇಳಿ ಎಲ್ಲರೂ ಭಯಭೀತರಾದೆವು. ನಾವು ಸುರಕ್ಷಿತರಾಗಿದ್ದೇವೆ ಆದರೆ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಇದೆ. ಪರಿಸ್ಥಿತಿ ಶೀಘ್ರ ಸುಧಾರಿಸಲಿ" ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ, ವಿಡಿಯೋ ಹಂಚಿಕೊಂಡ ಅವರು, ಕೆಲವು ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಸ್ಥಳದ ಬಳಿ ಸ್ಫೋಟ ಸಂಭವಿಸಿದೆ. ಕೂಡಲೇ ಅಲ್ಲಿಂದ ಓಡಿ ತಪ್ಪಿಸಿಕೊಂಡೆವು ಎಂದು ಅವರು ಬರೆದುಕೊಂಡಿದ್ದಾರೆ.
ವಿಮಾನ ರದ್ಧತಿಯಿಂದಾಗಿ, ಟೂರ್ನಮೆಂಟ್ ಪ್ರಾರಂಭವಾಗುವ ಸಮಯಕ್ಕೆ ಸಿಂಧು ಇಂಗ್ಲೆಂಡ್‌ಗೆ ತಲುಪಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಕ್ಯಾಲೆಂಡರ್‌ನ ಮಾರ್ಕ್ಯೂ ಟೂರ್ನಮೆಂಟ್‌ಗಳ ಮೇಲೆ ಈ ಯುದ್ಧ ಪರಿಣಾಮ ಬೀರಲಿದೆ.
ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ತುರ್ತು ಸಹಾಯಕ್ಕಾಗಿ ಸಂಪರ್ಕ ಸಂಖ್ಯೆಗಳನ್ನು ನೀಡಿದೆ. ಯುಎಇಯಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿಗಾ ಇರಿಸಿದ್ದು, ಸಿಲುಕಿಕೊಂಡವರಿಗೆ ಸಹಾಯ ಮಾಡುತ್ತಿದೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಪ್ರವಾಸದ ವೇಳೆ ಅಲ್ಲೇ ಸಿಲುಕಿಕೊಂಡಿದ್ದಾರೆ. ಅವರು ಉಳಿದಿದ್ದ ಹೋಟೆಲ್ ಸಮೀಪ ಮಿಸೈಲ್ ದಾಳಿ ನಡೆದಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಶಾಸಕ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಮಾತನಾಡಿ ದುಬೈನಲ್ಲಿ ಸಿಲುಕಿರುವ ಜನರ ಕುರಿತು ಮಾಹಿತಿ ನೀಡಿದ್ದಾರೆ. ಮಾಹಿತಿಯ ಪ್ರಕಾರ ಬಹ್ರೇನ್‌ನಲ್ಲಿ 6 ಮಂದಿ, ದುಬೈನಲ್ಲಿ ಬಳ್ಳಾರಿ ಮೂಲದ 35 ಮಂದಿ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ 50 ಮಂದಿ ಸೇರಿದಂತೆ ಕನಿಷ್ಠ 90ಕ್ಕೂ ಹೆಚ್ಚು ಕನ್ನಡಿಗರು ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಸಾಧ್ಯತೆ ಇದೆ.