ನವದೆಹಲಿ, ಮೇ 12: ಭಾರತದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರನ್ನು ಹೊಸ ಯುರೋಪಿಯನ್ ಟ್ವೆಂಟಿ20 ಲೀಗ್(European T20 League)ನಲ್ಲಿ ಡಬ್ಲಿನ್ ಫ್ರಾಂಚೈಸಿಯ ಸಹ-ಮಾಲೀಕರನ್ನಾಗಿ ಹೆಸರಿಸಲಾಗಿದೆ. 53 ವರ್ಷ ವಯಸ್ಸಿನ ರಾಹುಲ್ ದ್ರಾವಿಡ್ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ ಟೂರ್ನಮೆಂಟ್‌ನಲ್ಲಿ ತಂಡವನ್ನು ಸ್ವಾಧೀನಪಡಿಸಿಕೊಂಡ ಭಾರತೀಯ ಒಕ್ಕೂಟದ ಭಾಗವಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿರುವ ಮತ್ತು ತರಬೇತುದಾರರಾಗಿದ್ದ ದ್ರಾವಿಡ್, ಆರು ತಂಡಗಳ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್) ನ ಮಾಲೀಕರಲ್ಲಿ ಇತ್ತೀಚೆಗೆ ಹೆಸರಿಸಲಾದ ಮಾಜಿ ಕ್ರಿಕೆಟಿಗರಾಗಿದ್ದಾರೆ. ಡಬ್ಲಿನ್ ಗಾರ್ಡಿಯನ್ಸ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ಮಾಲೀಕರಾಗಿದ್ದಾರೆ. ಉದ್ಘಾಟನಾ ಆವೃತ್ತಿ ಆಗಸ್ಟ್ 26 ರಿಂದ ಸೆಪ್ಟೆಂಬರ್ 20ರವರೆಗೆ ನಡೆಯಲಿದೆ.
'ಈ ಟೂರ್ನಿ ಆಯೋಜನೆಯ ಹಿಂದೆ ಮಹತ್ತರವಾದ ಉದ್ದೇಶವಿದೆ. ತಳಮಟ್ಟದಿಂದ ಕ್ರಿಕೆಟ್ ಅನ್ನು ಬಲಪಡಿಸುವ ಮೂಲಕ ಐರ್ಲೆಂಡ್ ಮತ್ತು ಯುರೋಪಿನಾದ್ಯಂತ ಉದಯೋನ್ಮುಖ ಪ್ರತಿಭೆಗಳನ್ನು ಹೊರತರುವ ಆಶಯವನ್ನು ಈ ಟೂರ್ನಿ ಹೊಂದಿದೆ. ಯುರೋಪಿನಲ್ಲಿ ಕ್ರಿಕೆಟ್ ಬೆಳೆಸಲು ಈ ಟೂರ್ನಿ ಸಹಾಯ ಮಾಡುತ್ತದೆ' ಎಂದು ದ್ರಾವಿಡ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಅಶ್ವಿನ್ ನಾಯಕ
ರಾಹುಲ್ ದ್ರಾವಿಡ್ ಮಾಲೀಕತ್ವದ ಗಾರ್ಡಿಯನ್ಸ್ ತಂಡವನ್ನು ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಮುನ್ನಡೆಸಲಿದ್ದಾರೆ. ಈ ತಂಡವು ಬೆಲ್‌ಫಾಸ್ಟ್, ಎಡಿನ್‌ಬರ್ಗ್, ಗ್ಲ್ಯಾಸ್ಗೋ, ರೋಟರ್‌ಡ್ಯಾಮ್ ಮತ್ತು ಆಮ್ಸ್ಟರ್‌ಡ್ಯಾಮ್ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ.
DC vs PBKS: ಕಳಪೆ ಬೌಲಿಂಗ್, ಫೀಲ್ಡಿಂಗ್ ಸೋಲಿಗೆ ಕಾರಣ; ನಾಯಕ ಶ್ರೇಯಸ್ ಅಯ್ಯರ್
ಈ ಲೀಗ್‌ನಲ್ಲಿ ಮಿಚೆಲ್ ಮಾರ್ಷ್, ಟಿಮ್ ಡೇವಿಡ್, ಮಿಚೆಲ್ ಸ್ಯಾಂಟ್ನರ್, ಲಿಯಾಮ್ ಲಿವಿಂಗ್‌ಸ್ಟೋನ್, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್, ಹೆನ್ರಿಕ್ ಕ್ಲಾಸೆನ್ ಸೇರಿದಂತೆ ಅಂತಾರಾಷ್ಟ್ರೀಯ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ.
ತಂಡಗಳ ಮಾಲೀಕರು
ಡಬ್ಲಿನ್ ಫ್ರಾಂಚೈಸ್ - ರಾಹುಲ್ ದ್ರಾವಿಡ್
ಬೆಲ್‌ಫಾಸ್ಟ್ ಫ್ರಾಂಚೈಸ್ - ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರೋಹನ್ ಲುಂಡ್
ಎಡಿನ್‌ಬರ್ಗ್ ಫ್ರಾಂಚೈಸ್ - ಕೈಲ್ ಮಿಲ್ಸ್, ನಾಥನ್ ಮೆಕಲಮ್ ಮತ್ತು ರಾಚೆಲ್ ವೈಸ್‌ಮನ್
ಗ್ಲಾಸ್ಗೋ ಫ್ರಾಂಚೈಸ್ - ವಿಪುಲ್ ಅಗರವಾಲ್ ಮತ್ತು ಕ್ರಿಸ್ ಗೇಲ್
ಆಮ್ಸ್ಟರ್‌ಡ್ಯಾಮ್ ಫ್ರಾಂಚೈಸ್ - ಸ್ಟೀವ್ ವಾ, ಜೇಮೀ ಡ್ವೈಯರ್ ಮತ್ತು ಟಿಮ್ ಥಾಮಸ್
ರೋಟರ್‌ಡ್ಯಾಮ್ ಫ್ರಾಂಚೈಸ್ - ಜಾಂಟಿ ರೋಡ್ಸ್, ಫಾಫ್ ಡು ಪ್ಲೆಸಿಸ್, ಗ್ಲಾಶಿನ್ ಮತ್ತು ಸಮೀರ್ ಶಾ